
ಬೆಂಗಳೂರು: 2024-25 ಹಾಗೂ 2025-26 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ ಸೇರಿದಂತೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತೀ ಹೆಚ್ಚು ಮಳೆಯಾಗಿದ್ದು, ಪರಿಣಾಮ ನೆರೆ–ಪ್ರವಾಹದಿಂದಾಗಿ ಹಲವಾರು ರಸ್ತೆ, ಸೇತುವೆಗಳು ಹಾಗೂ ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಹಾನಿಗೊಳಗಾದ ರಸ್ತೆಗಳ ಅಭಿವೃದ್ಧಿಗೆ ತುರ್ತು ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ.

2024-25ನೇ ಸಾಲಿನಲ್ಲಿ ಸಲ್ಲಿಸಲಾದ ಪ್ರಸ್ತಾವನೆಯ ಅಂದಾಜು ನಷ್ಟದ ಮೊತ್ತ ಲೋಕೋಪಯೋಗಿ ಇಲಾಖೆ 2723.00 ಲಕ್ಷ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 2254.00 ಲಕ್ಷ, ನಗರಾಭಿವೃದ್ಧಿ ಇಲಾಖೆ 500.00 ಲಕ್ಷ ಹಾಗಾಗಿ ಒಟ್ಟು ಅಂದಾಜು ನಷ್ಟದ ಮೊತ್ತ 5477.00 ಲಕ್ಷ ರೂಪಾಯಿ ಆಗಿರುತ್ತದೆ. ಆದರೆ ಬಿಡುಗಡೆಯಾದ ಅನುದಾನ ಲೊಕೋಪಯೋಗಿ ಇಲಾಖೆ 140.00, ಗ್ರಾಮೀಣಾಭಿವೃದ್ದಿ ಇಲಾಖೆ 120.00 ಲಕ್ಷ, ನಗರಾಭಿವೃದ್ದಿ ಇಲಾಖೆ 16.75. ಲಕ್ಷ ಬಿಡುಗಡೆಯಾಗಿದ್ದು ಒಟ್ಟಾರೆ 276.75 ಲಕ್ಷ ರೂಪಾಯಿ ಅನುದಾನ ಮಾತ್ರ ಬಿಡುಗಡೆ ಆಗಿರುತ್ತದೆ. ಪ್ರಸಕ್ತ 2025-26 ಸಾಲಿನಲ್ಲಿ ಜುಲೈ 20ರವರೆಗೆ ಪ್ರಸ್ತಾವನೆ ಸಲ್ಲಿಸಿದ ಅಂದಾಜು ನಷ್ಟದ ಮೊತ್ತ ಲೋಕೋಪಯೋಗಿ ಇಲಾಖೆ 1623.00 ಲಕ್ಷ ರೂಪಾಯಿ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 3797.00 ಲಕ್ಷ ರೂಪಾಯಿ ನಗರಾಭಿವೃದ್ಧಿ ಇಲಾಖೆ 2500.00 ಲಕ್ಷ ರೂಪಾಯಿ. ಒಟ್ಟು 7970.00 ಲಕ್ಷ ರೂಪಾಯಿ ಹಾನಿ ಆಗಿರುವುದಾಗಿ ಇಲಾಖೆಗಳಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.
2025-26 ಸಾಲಿನಲ್ಲಿ ಪ್ರತಿ ಇಲಾಖೆಗೆ ಬಿಡುಗಡೆಯಾದ ಅನುದಾನ ಶೂನ್ಯವಾಗಿದೆ ಎಂದು ಪತ್ರದಲ್ಲಿ ಅವರು ಮನವರಿಕೆ ಮಾಡಿದ್ದಾರೆ. ಇನ್ನಷ್ಟು ಮಳೆ ಆಗುವ ಸಂಭವ ಇದ್ದು, ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈವರೆಗೆ ಪ್ರಸ್ತಾವನೆ ಸಲ್ಲಿಸಿದರೂ, 2025-26 ನೇ ಸಾಲಿಗೆ ಯಾವುದೇ ಅನುದಾನ ಬಿಡುಗಡೆ ಆಗಿರುವುದಿಲ್ಲ, ಇದರಿಂದಾಗಿ ರಸ್ತೆಗಳ ನಿರ್ವಹಣೆಯಲ್ಲಿ ಗಂಭೀರ ಅಡಚಣೆ ಎದುರಾಗಿದೆ ಎಂದವರು ತಿಳಿಸಿದ್ದು, ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 134.47 ಕೋಟಿಗೂ ಅಧಿಕ ಮೊತ್ತದ ಹಾನಿಯಾಗಿದ್ದು, ಹಾನಿಯಾದ ರಸ್ತೆಗಳು ಹಾಗೂ ಕಟ್ಟಡಗಳ ನಿರ್ವಹಣೆಗೆ ತುರ್ತು ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿರುತ್ತಾರೆ.