
ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿದ್ದ ಪಂಚ ಗ್ಯಾರೆಂಟಿಗಳ ಪೈಕಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆ ನೂರಾರು ಮಹಿಳೆಯರಿಗೆ ಮೂರು ತಿಂಗಳಿನಿಂದ ಹಣವಿಲ್ಲದೆ ನಿರೀಕ್ಷೆಯಲ್ಲಿ ಇರಿಸಿದೆ. ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿನ ಮನೆಯ ಯಜಮಾನಿಯರಿಗೆ ತಿಂಗಳಿಗೆ ₹2,000 ಜಮೆ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ, ಕಳೆದ ಕೆಲವು ತಿಂಗಳಿಂದ ಹಣ ಜಮೆಯಾಗದೇ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೋಜನೆ ಹಣ ತಡ – ಮಹಿಳೆಯರ ಆಕ್ರೋಶ
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಹಣ , ಪ್ರತೀ ತಿಂಗಳು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದ ಮಹಿಳೆಯರು ಈಗ ಸರ್ಕಾರದ ನಿರ್ಲಕ್ಷ್ಯಕ್ಕೆ ಕಿಡಿಕಾರುತ್ತಿದ್ದಾರೆ. ಇದಕ್ಕೆ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಜನತೆಗೂ ಹಣಕ್ಕೂ ಮಧ್ಯೆ ರಾಜಕೀಯ ಆಟ ಆಡುತ್ತಿದೆ ಎಂಬ ಆರೋಪ ಹೊರಿಸಿದೆ.
ಸಚಿವ ಕೆ.ಜೆ. ಜಾರ್ಜ್ ವಿವಾದಾತ್ಮಕ ಹೇಳಿಕೆ
ಈ ಬಗ್ಗೆ ಮಾಧ್ಯಮಗಳು “ಗೃಹಲಕ್ಷ್ಮಿ ಹಣ ಮೂರು ತಿಂಗಳಿನಿಂದ ಬಂದಿಲ್ಲವೇಕೆ?” ಎಂದು ಸಚಿವ ಕೆ.ಜೆ. ಜಾರ್ಜ್ ಅವರನ್ನು ಪ್ರಶ್ನಿಸಿದಾಗ, “ತಿಂಗಳು ತಿಂಗಳು ಹಾಕಕ್ಕೆ ಅದೇನು ಸಂಬಳನಾ? ಹಾಕ್ತಾರೆ ಬಿಡಿ!” ಎಂದು ನಿರ್ಲಕ್ಷ್ಯ ಭರಿತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವರ ಈ ಹೇಳಿಕೆ ಇದೀಗ ರಾಜ್ಯದಲ್ಲಿ ವಿವಾದಕ್ಕೆ ಕಾರಣ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಮೊದಲು ಘೋಷಣೆ ಮಾಡಿ, ಅಧಿಕಾರಕ್ಕೆ ಬಂದ ಮೇಲೆ ನಿರ್ಲಕ್ಷ್ಯ ತೋರುವ ಸರ್ಕಾರ ಜನರ ಪ್ರಶ್ನೆಗಳಿಗೆ ಗಂಭೀರವಾಗಿ ಉತ್ತರ ನೀಡಬೇಕೇ ಹೊರತು ತಿರಸ್ಕಾರಯುಕ್ತವಾಗಿ ಅಲ್ಲ ಎಂಬ ಬೇಸರ ಜನರಲ್ಲಿ ವ್ಯಕ್ತವಾಗಿದೆ.