
ಟೆಕ್ ದಿಗ್ಗಜ ಮೈಕ್ರೋಸಾಫ್ಟ್ ವಿಶ್ವದಾದ್ಯಂತ ತನ್ನ ಸಿಬ್ಬಂದಿಯ ಶೇಕಡಾ 3 ರಷ್ಟು, ಅಂದರೆ ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಮಾಹಿತಿ ಹೊರಬಿದ್ದಿದೆ. ನಿರ್ವಹಣಾ ಹಂತದ ಪುನರ್‌ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದ್ದು, ಅಮೆರಿಕಾ ಸೇರಿದಂತೆ ಹಲವು ಭೌಗೋಳಿಕ ಪ್ರದೇಶಗಳಲ್ಲಿನ ಸಿಬ್ಬಂದಿಗೆ ಮಂಗಳವಾರವೇ ಸೂಚನೆ ನೀಡಲಾಗಿದೆ.
ಕಂಪನಿಯು ಮಂಗಳವಾರ ಅಧಿಕೃತ ಸೂಚನೆಗಳನ್ನು ಬಿಡುಗಡೆ ಮಾಡಿದ್ದು, ಈ ನಿರ್ಧಾರವು ಮುಖ್ಯವಾಗಿ ನಿರ್ವಹಣಾ ಮಟ್ಟ ಕಡಿತಗೊಳಿಸುವ ಉದ್ದೇಶದೊಂದಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಅಸೋಸಿಯೇಟೆಡ್ ಪ್ರೆಸ್ ವರದಿಯಂತೆ, ನಿಖರ ವಜಾಗೊಳಿಕೆಯ ಸಂಖ್ಯೆಯ ವಿವರವನ್ನು ಮೈಕ್ರೋಸಾಫ್ಟ್ ಬಹಿರಂಗಪಡಿಸಿಲ್ಲ.

ವಿಚಿತ್ರವೆಂದರೆ, ಇದಕ್ಕೂ ಕೇವಲ ಎರಡು ವಾರಗಳ ಹಿಂದಷ್ಟೇ ಮೈಕ್ರೋಸಾಫ್ಟ್ ಸಂಸ್ಥೆಯು ಜನವರಿಯಿಂದ ಮಾರ್ಚ್ ತನಕದ ತ್ರೈಮಾಸಿಕ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿತ್ತು. ಈ ಫಲಿತಾಂಶಗಳು ಅದರ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ವಿಭಾಗಗಳಲ್ಲಿ ಕಂಡುಬಂದ ಬಲಿಷ್ಠ ಕಾರ್ಯಕ್ಷಮತೆಯಿಂದ ಉತ್ತೇಜನ ಪಡೆದಿದ್ದವು.