
ಮೈಸೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಆಕ್ರಮಣಾತ್ಮಕ ವಸೂಲಿ ಕ್ರಮಕ್ಕೆ ಹೆದರಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಶುಕ್ರವಾರ ನಡೆದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದರು.
“ಸರ್ಕಾರ ಸದಾ ಜನರ ಜೊತೆಗಿದೆ. ಯಾರೇ ತೊಂದರೆ ಕೊಟ್ಟರೂ ದೂರು ನೀಡಲು ಹೆದರುವ ಅಗತ್ಯವಿಲ್ಲ. ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ” ಎಂದು ಸಿಎಂ ಭರವಸೆ ನೀಡಿದರು. ಬಡವರ ಆರ್ಥಿಕ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ನಿಯಂತ್ರಣ ತರಲು ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ತರಲು ಸಿದ್ಧವಾಗಿದೆ.
“ಬಡವರು ತುರ್ತು ಹಣಕಾಸಿಗೆ ಎಲ್ಲಿ ಸಾಲ ಸಿಗುತ್ತದೆಯೋ ಅಲ್ಲಿ ಹೋಗುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಮೈಕ್ರೋ ಫೈನಾನ್ಸ್ ಕಂಪನಿಗಳು ಹೆಚ್ಚು ಬಡ್ಡಿ ವಿಧಿಸಲು ಬಳಸಿಕೊಂಡಿವೆ. ಕೇವಲ ಅತಿಯಾದ ಬಡ್ಡಿ ಹಾಕುವುದು ಮಾತ್ರವಲ್ಲ, ಔಟ್‌ಸೋರ್ಸ್ ಮೂಲಕ ಗೂಂಡಾಗಳನ್ನು ನೇಮಿಸಿ ಹಣ ವಸೂಲಿ ಮಾಡುತ್ತಿದ್ದಾರೆ” ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ನಾವು ಈಗಾಗಲೇ ಸುಗ್ರೀವಾಜ್ಞೆ ತರಲು ಸಿದ್ಧತೆ ಮಾಡಿದ್ದೇವೆ. ಇದರಿಂದ ಇಂತಹ ಅಕ್ರಮ ವಸೂಲಿ ತಕ್ಷಣವೇ ನಿಲ್ಲಲಿದೆ. ರಾಜ್ಯದ ಜನರು ಆತ್ಮಹತ್ಯೆಗೆ ಶರಣಾಗಬಾರದು. ಸರ್ಕಾರ ನಿಮಗೆ ನ್ಯಾಯ ಒದಗಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.