
ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದ ವಿದ್ಯುತ್ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ಮುಂದಿನ ಮೂರು ವರ್ಷಗಳ ಅವಧಿಗೆ ವಿದ್ಯುತ್ ದರ ಪರಿಷ್ಕರಣೆಗೆ ಅನುಮೋದನೆ ದೊರೆತಿದ್ದರೂ, ಮೆಸ್ಕಾಂ (MESCOM) ಅನುಭವಿಸಿರುವ ನಷ್ಟದ ಮೊತ್ತವನ್ನು ಸರಿದೂಗಿಸಲು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ದಟ್ಟವಾಗಿದೆ. 2026-27ರ ಆರ್ಥಿಕ ವರ್ಷದಲ್ಲಿ ಪ್ರತಿ ಯೂನಿಟ್ ಮೇಲೆ ಸರಾಸರಿ 5 ಪೈಸೆ ಏರಿಕೆಯಾಗುವುದು ಖಚಿತವಾಗಿದ್ದು, ಇದರ ಜೊತೆಗೆ ಸಂಸ್ಥೆಯ 83.11 ಕೋಟಿ ರೂಪಾಯಿಗಳ ನಷ್ಟದ ಲೆಕ್ಕಾಚಾರವೂ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲಿದೆ.
ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗವು (KERC) ಈ ಹಿಂದೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮೂರು ವರ್ಷಗಳ ಅವಧಿಯ ದರ ಪಟ್ಟಿಯನ್ನು ಸಿದ್ಧಪಡಿಸಲು ಸೂಚಿಸಿತ್ತು. ಅದರಂತೆ ಮೆಸ್ಕಾಂ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಆಯೋಗವು, 2025-26ರಲ್ಲಿ ದರ ಏರಿಕೆ ಮಾಡದೆ ಯೂನಿಟ್ ಬೆಲೆಯನ್ನು 8.61 ರೂಪಾಯಿಯಲ್ಲೇ ಉಳಿಸಿಕೊಂಡಿತ್ತು. ಆದರೆ, ಮುಂದಿನ ವರ್ಷ ಅಂದರೆ 2026 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ದರವನ್ನು 8.66 ರೂಪಾಯಿಗೆ ಹಾಗೂ 2027-28ರಲ್ಲಿ 8.72 ರೂಪಾಯಿಗೆ ಹೆಚ್ಚಿಸಲು ಹಸಿರು ನಿಶಾನೆ ತೋರಿದೆ.
ಇಷ್ಟಾದರೂ ಮೆಸ್ಕಾಂನ ಆರ್ಥಿಕ ಸಂಕಷ್ಟ ಮಾತ್ರ ಮುಗಿದಿಲ್ಲ. ವಿದ್ಯುತ್ ಖರೀದಿ ದರದಲ್ಲಿನ ಏರಿಕೆ, ವಿತರಣಾ ಜಾಲದ ನಿರ್ವಹಣೆ ಮತ್ತು ದುರಸ್ತಿ ವೆಚ್ಚಗಳು ಮಿತಿ ಮೀರಿರುವುದರಿಂದ ಕಂಪನಿಯು ಬೃಹತ್ ಮೊತ್ತದ ಕಂದಾಯ ಕೊರತೆಯನ್ನು ಎದುರಿಸುತ್ತಿದೆ. ಈ ನಷ್ಟವನ್ನು ತುಂಬಿಕೊಳ್ಳಲು ದರ ಏರಿಕೆಯೇ ಅಂತಿಮ ದಾರಿ ಎಂದು ಮೆಸ್ಕಾಂ ಅಧಿಕಾರಿಗಳು ಭಾವಿಸಿದ್ದಾರೆ. ಆದರೆ, ಕಂಪನಿಯ ಆಡಳಿತಾತ್ಮಕ ವೈಫಲ್ಯ ಅಥವಾ ಅನಗತ್ಯ ವೆಚ್ಚಗಳ ಹೊರೆಯನ್ನ ಗ್ರಾಹಕರು ಏಕೆ ಹೊರಬೇಕು ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಆಯೋಗವು ವಾರ್ಷಿಕ ಕಾರ್ಯನಿರ್ವಹಣೆ ವರದಿಯನ್ನು ಆಧರಿಸಿ ಅಂತಿಮ ತೀರ್ಪು ನೀಡಲಿದ್ದು, ಒಂದು ವೇಳೆ ಅನುಮೋದನೆ ಸಿಕ್ಕರೆ ಈಗಾಗಲೇ ನಿಗದಿಯಾಗಿರುವ 5 ಪೈಸೆಯ ಜೊತೆಗೆ ಮತ್ತಷ್ಟು ಮೊತ್ತ ಏರಿಕೆಯಾಗುವ ಆತಂಕ ಮನೆಮಾಡಿದೆ.



































