
ಉಡುಪಿ: ಕರಾವಳಿ ಕರ್ನಾಟಕ ಮತ್ತು ಮುಂಬಯಿ ನಡುವಿನ ಪ್ರಮುಖ ಸಂಪರ್ಕ ಸಾಧನವಾದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 17ರಿಂದ ಹೊಸ ರೂಪದಲ್ಲಿ ಸಂಚರಿಸಲಿದೆ. ಜನರ ಬೇಡಿಕೆಯನ್ನು ಪರಿಗಣಿಸಿ ರೈಲ್ವೆ ಇಲಾಖೆ ಈ ರೈಲಿಗೆ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಎಚ್‌ಬಿ ಕೋಚ್ ಗಳನ್ನು ಅಳವಡಿಸುತ್ತಿದೆ.
ಇದರಿಂದ ರೈಲು ಸುರಕ್ಷಿತವಾಗಿರಲಿದ್ದು, ತೀವ್ರ ಅಪಘಾತದ ಸಂದರ್ಭದಲ್ಲೂ ಕೋಚ್‌ಗಳು ಪಲ್ಟಿಯಾಗದೇ ZIGZAG ರೀತಿಯಲ್ಲಿ ನಿಂತುಬಿಡುವ ತಂತ್ರಜ್ಞಾನವನ್ನು ಹೊಂದಿರುತ್ತವೆ. ಇದಲ್ಲದೇ, ಶಬ್ದ ಮತ್ತು ಕಂಪನ ತೀವ್ರತೆ ಕಡಿಮೆಯಾಗಲಿದ್ದು, ಶೌಚಾಲಯ ವ್ಯವಸ್ಥೆಯೂ ಆಧುನಿಕ ಶೈಲಿಗೆ ಬದಲಾವಣೆಗೊಂಡಿದೆ.
ಉಡುಪಿಗೆ ಈ ಹೊಸ ಕೋಚ್‌ಗಳಿರುವ ರೈಲು ಆಗಮಿಸುವ ವೇಳೆ ಅದನ್ನು ಭವ್ಯವಾಗಿ ಸ್ವಾಗತಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮುಂದಿನ ರೈಲ್ವೆ ಯೋಜನೆಗಳ ಕುರಿತ ಚರ್ಚೆಯೂ ನಡೆಯಲಿದ್ದು, ರೈಲ್ವೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರಯಾಣಿಕರು ತಮ್ಮ ಅನುಭವ ಮತ್ತು ತೊಂದರೆಗಳನ್ನು ನೇರವಾಗಿ ಮಂಡಿಸಲು ಈ ಅವಕಾಶ ನೀಡಲಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಬಳಿಕ, ಕರಾವಳಿಗರ ಮತ್ತೊಂದು ಪ್ರೀತಿಯ ರೈಲು ಮಂಗಳೂರು ಎಕ್ಸ್‌ಪ್ರೆಸ್‌ಗೆ ಮಾರ್ಚ್ 1ರಿಂದ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗುವುದು. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ನನ್ನ ಮನವಿಗೆ ಬೆಂಬಲ ನೀಡಿದ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಮತ್ಸ್ಯಗಂಧ ರೈಲಿನ ಭಾವುಕ ಕೊಂಡಿ
ಮತ್ಸ್ಯಗಂಧ ರೈಲು 1998ರ ಮೇ 1ರಂದು ತಕ್ಷಣದ ಕೇಂದ್ರ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ಅವರ ಪರಿಶ್ರಮ ಮತ್ತು ತಕ್ಷಣದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಳಜಿಯಿಂದ ಕೋಂಕಣ ರೈಲ್ವೆ ಮಾರ್ಗದಲ್ಲಿ ಆರಂಭಗೊಂಡಿತ್ತು. ಈ ರೈಲು ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿ ಜನರ ಭಾವುಕ ಸಂಬಂಧವನ್ನು ಬಲಪಡಿಸಿದೆ. ಈಗ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಹೊಸ ಬಣ್ಣದಲ್ಲಿ ರೈಲು ಪಯಣ ಮಾಡಲಿದೆ.
ಕರಾವಳಿಗರ ಬಹುಕಾಲದ ಕನಸು ನನಸು
ಪ್ರಯಾಣಿಕರಿಂದ ಮತ್ಸ್ಯಗಂಧ ರೈಲಿನ ಹಳೆಯ ಕೋಚ್‌ಗಳನ್ನು ಬದಲಾಯಿಸಲು ನಿರಂತರ ಮನವಿಗಳು ಬಂದಿದ್ದವು. ಈ ಮನವಿಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು ಹೊಸ ಎಲ್‌ಎಚ್‌ಬಿ ಕೋಚ್‌ಗಳ ಅಳವಡಿಕೆಗೆ ಅನುಮೋದನೆ ನೀಡಿದರು.
ಇದರ ಜೊತೆಗೆ, ಕರಾವಳಿ ಕರ್ನಾಟಕ ಮತ್ತು ಮುಂಬಯಿಯನ್ನು ಬೆಸೆಯುವ ಮಂಗಳೂರು ಎಕ್ಸ್‌ಪ್ರೆಸ್ ಕೂಡ ಹೊಸ ಕೋಚ್‌ಗಳೊಂದಿಗೆ ಆಧುನಿಕ ಸ್ಪರ್ಶ ಪಡೆಯಲಿದೆ.