
ಸಿಯೋಲ್: ದಕ್ಷಿಣ ಕೊರಿಯಾ ಇತಿಹಾಸದಲ್ಲೇ ಅತ್ಯಂತ ಭೀಕರ ಕಾಳ್ಗಿಚ್ಚಿಗೆ ತುತ್ತಾಗಿದೆ. ಉಯಿಸಿಯೋಂಗ್ ಪ್ರದೇಶದಲ್ಲಿ ಶುಕ್ರವಾರ ಪ್ರಾರಂಭವಾದ ಈ ಬೆಂಕಿ 28 ಮಂದಿಯನ್ನು ಬಲಿ ತೆಗೆದುಕೊಂಡಿದ್ದು, 88,960 ಎಕರೆಗೂ ಹೆಚ್ಚು ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಇದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಕಾಳ್ಗಿಚ್ಚನ್ನು ನೆನಪಿಸುವಂತಿದೆ. ಬೆಂಕಿ ನಿಯಂತ್ರಣಕ್ಕೆ ಹಲವಾರು ತಂಡಗಳು ಶ್ರಮಿಸುತ್ತಿದ್ದು, ಜನರ ಸುರಕ್ಷತೆಗಾಗಿ 37,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಆದರೆ, ವೇಗವಾಗಿ ಬೀಸುವ ಗಾಳಿ ಬೆಂಕಿ ಮತ್ತಷ್ಟು ವ್ಯಾಪಿಸಲು ಕಾರಣವಾಗುತ್ತಿದೆ.
ಈ ಕಾಳ್ಗಿಚ್ಚಿನಲ್ಲಿ ದೇಶದ ಐತಿಹಾಸಿಕ ಮತ್ತು ಪಾರಂಪರಿಕ ಸ್ಮಾರಕಗಳು ಕೂಡ ಭಸ್ಮವಾಗಿವೆ. 1,300 ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ಧ ಗೌಡ್ರಾ ಬೌದ್ಧ ದೇಗುಲದ 20-30 ಕಟ್ಟಡಗಳು ಬೆಂಕಿಗೆ ಆಹುತಿಯಾದವು. ಆದರೆ, ಅಗ್ನಿ ವ್ಯಾಪಿಸುವ ಮುನ್ನವೇ ದೇಗುಲದಲ್ಲಿರುವ ಬೃಹತ್ ಬುದ್ಧ ವಿಗ್ರಹವನ್ನು ರಕ್ಷಿಸಲು ಸಾಧ್ಯವಾಯಿತು. ಇದರ ಜೊತೆಗೆ, ದಕ್ಷಿಣ ಕೊರಿಯಾ ತನ್ನ ಐತಿಹಾಸಿಕ ಮತ್ತು ಸಂಸ್ಕೃತಿಯ ಹೆಗ್ಗುರುತುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಬೆಂಕಿಯಿಂದ ಹಾನಿಗೊಳಗಾಗುವ ಸಾಧ್ಯತೆ ಇರುವ ವಿಗ್ರಹಗಳು, ಪ್ರಾಚೀನ ನಿರ್ಮಾಣಗಳು ಹಾಗೂ ಅಮೂಲ್ಯ ದಾಖಲೆಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಯುನೆಸ್ಕೋ ಪಾರಂಪರಿಕ ತಾಣ ಪಟ್ಟಿಯಲ್ಲಿರುವ 600 ವರ್ಷ ಪುರಾತನ ಆಂಡೊಂಗ್ ಹಾಹೋ ಜನಪದ ಗ್ರಾಮ ಮತ್ತು ಬ್ಯಂಗ್ಯನ್ ಕನ್ಸೂಶಿಯನ್ ಅಕಾಡೆಮಿಗೆ ಬೆಂಕಿ ವ್ಯಾಪಿಸದಂತೆ ಅಗ್ನಿ ನಿರೋಧಕ ಸಿಂಪಡನೆ ಮಾಡಲಾಗಿದೆ. ಆದರೂ, ಹಾಹೋ ಗ್ರಾಮಕ್ಕೆ ಬೆಂಕಿ ಹರಡಿದ ಕಾರಣ ಅಲ್ಲಿನ ಅಮೂಲ್ಯ ದಾಖಲೆಗಳನ್ನು ತಕ್ಷಣ ಸ್ಥಳಾಂತರಿಸಲಾಗಿದ್ದು, ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ದಕ್ಷಿಣ ಕೊರಿಯಾ ಈ ಕಾಳ್ಗಿಚ್ಚಿನ ಪರಿಣಾಮಗಳಿಂದ ಜನರ ರಕ್ಷಣೆಯೊಂದಿಗೆ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಪಣ ತೊಟ್ಟಿದೆ.