
ಪುತ್ತೂರು: ಕಾರು ಖರೀದಿಸುವ ನೆಪದಲ್ಲಿ ಪರಿಚಯಸ್ಥನೊಬ್ಬ ಮಹಿಳೆಯ ನಕಲಿ ಸಹಿ ಮಾಡಿ, ಒಪ್ಪಿಗೆ ಪತ್ರದ ಮೂಲಕ ಶೋರೂಂನಿಂದ ಕಾರು ಖರೀದಿಸಿ ವಂಚನೆ ಮಾಡಿರುವ ಪ್ರಕರಣ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಆರೋಪಿತ ವ್ಯಕ್ತಿ, ಶೋರೂಂನ ಮೂವರು ಸಿಬ್ಬಂದಿಗಳು (ಮ್ಯಾನೇಜರ್, ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್) ಮತ್ತು ಕಾರು ಪಡೆದ ಮಹಿಳೆ ಸೇರಿದಂತೆ ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರಗಳು:
ಅಮರಮುಡೂರು ಗ್ರಾಮದ ಚೊಕ್ಕಾಡಿ ನಿವಾಸಿ ಕಾವ್ಯ ಎಂ. ಅವರು 2024ರ ಫೆಬ್ರವರಿ 29ರಂದು ತಮ್ಮ ಲಿಖಿತ್, ತಂಗಿ ಪೂರ್ಣಿಮಾ ಮತ್ತು ಪರಿಚಯಸ್ಥ ಬೆಂಗಳೂರು ನಿವಾಸಿ ಅನಿಲ್ ಕುಮಾರ್ ಜೊತೆ ಪುತ್ತೂರಿನ ಕಾರ್ ಶೋರೂಂಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಬ್ರೆಝಾ ಕಾರು ಬುಕ್ ಮಾಡಿ, ಮುಂಗಡವಾಗಿ ₹1.50 ಲಕ್ಷವನ್ನು ಶೋರೂಂನ ಸೇಲ್ಸ್ ಎಕ್ಸಿಕ್ಯೂಟಿವ್ ಪೃಥ್ವಿ ಅವರಿಗೆ ಪಾವತಿಸಿದ್ದರು. ನಂತರ, ಬಾಕಿ ಉಳಿದ ₹40,000 ಅನ್ನು 2024ರ ಮಾರ್ಚ್ 5ರಂದು ಯುಪಿಐ ಮೂಲಕ ಪಾವತಿಸಲಾಗಿತ್ತು.
ಕೆಲವು ಕಾರಣಗಳಿಂದ ಕಾವ್ಯ ಅವರಿಗೆ ತಕ್ಷಣ ಕಾರು ಖರೀದಿಸಲು ಸಾಧ್ಯವಾಗದಿದ್ದರಿಂದ, ಅವರು ಸ್ವಲ್ಪ ಕಾಲಾವಕಾಶ ಕೋರಿ, ಮುಂಗಡ ಹಣವನ್ನು ಶೋರೂಂನಲ್ಲಿಯೇ ಇರಿಸಲು ಪೃಥ್ವಿ ಅವರಿಗೆ ತಿಳಿಸಿದ್ದರು.
ಆಗಸ್ಟ್ ತಿಂಗಳಲ್ಲಿ ಕಾವ್ಯ ಅವರು ಪೃಥ್ವಿ ಅವರಿಗೆ ಕರೆ ಮಾಡಿ ಕಾರು ಖರೀದಿಸುವ ಇಚ್ಛೆ ವ್ಯಕ್ತಪಡಿಸಿದಾಗ, ಅನಿಲ್ ಕುಮಾರ್ ಎಂಬಾತ ತಮ್ಮ ಸಹಿ ಇರುವ ಒಪ್ಪಿಗೆ ಪತ್ರವನ್ನು ನೀಡಿ ಕಾರನ್ನು ಖರೀದಿಸಿದ್ದಾರೆ ಎಂದು ಪೃಥ್ವಿ ತಿಳಿಸಿದ್ದಾರೆ.
ಈ ಕುರಿತು ಶೋರೂಂನಲ್ಲಿ ವಿಚಾರಿಸಿದಾಗ, ಕಾವ್ಯ ಅವರು ನೀಡಿದ್ದ ಮುಂಗಡ ಹಣವನ್ನು ಹೊಂದಾಣಿಕೆ ಮಾಡಿ, ಅನಿಲ್ ಖರೀದಿಸಿದ ಕಾರನ್ನು ಹೇಮ ಎಂಬವರಿಗೆ ನೀಡಿರುವ ಮಾಹಿತಿ ಲಭ್ಯವಾಗಿದೆ.
ಈ ರೀತಿ ಮೋಸ ಮಾಡುವ ಉದ್ದೇಶದಿಂದ ತನ್ನ ನಕಲಿ ಸಹಿ ಮಾಡಿ ಒಪ್ಪಿಗೆ ಪತ್ರವನ್ನು ಶೋರೂಂಗೆ ನೀಡಿ ಕಾರನ್ನು ಖರೀದಿಸಿದ್ದ ಅನಿಲ್ ಕುಮಾರ್, ಹಾಗು ಕಾರು ಖರೀದಿ ಮಾಡಿದ ಬಗ್ಗೆ ಯಾವುದೇ ಮಾಹಿತಿ ನೀಡದೆ ಕಾರನ್ನು ನೀಡಿದ ಶೋರೂಂ ಮ್ಯಾನೇಜರ್, ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್ ಪೃಥ್ವಿ, ಮತ್ತು ಕಾರು ಪಡೆದ ಹೇಮ ಎಂಬವರ ವಿರುದ್ಧ ಕಾವ್ಯ ಅವರು ನೀಡಿದ ದೂರಿನ ಮೇರೆಗೆ ಜುಲೈ 10ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.