
ಉಡುಪಿ, ಜು.31: 18 ವರ್ಷಕ್ಕೆ ಮತದಾನದ ಹಕ್ಕನ್ನು ಪಡೆಯುವ ನಮ್ಮ ಯುವಜನತೆ ಅದರೊಂದಿಗೆ ರಕ್ತದಾನದ ಹಕ್ಕನ್ನೂ ಪಡೆಯುತ್ತಾರೆ. ಇದನ್ನು ಸದುಪಯೋಗ ಪಡಿಸಿಕೊಂಡು ಯುವಜನತೆ ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನಕ್ಕೆ ಮುಂದಾಗಬೇಕು. ಇದರಿಂದ ಅಮೂಲ್ಯ ಜೀವವನ್ನು ಉಳಿಸಲು ಸಾದ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾಕುಮಾರಿಯವರು ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ 12 ನೇ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಗುರುವಾರ ಸಂಸ್ಥೆಯಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮುಂಡ್ಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಸುರೇಂದ್ರ ಶೆಟ್ಟಿ, ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರದ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ಉಡುಪಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರಾಂಕ್ಲಿ ಡಿಸೋಜ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿದೆಡೆಗಳ ರಕ್ತದಾನಿಗಳಾಗಿ ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಿರುವ ದಿಶಾನ್ ಪೂಜಾರಿ, ಶ್ರೀನಿವಾಸ್ ಪ್ರಸಾದ್ ಮಯ್ಯ, ಶಾಂತರಾಮ್ ಮೊಗವೀರ, ಝಾಕೀರ್ ಹುಸೇನ್, ವಿನುತಾ ಕಿರಣ್, ಜಯರಾಜ್ ಸಾಲಿಯಾನ್, ನಿತ್ಯಾನಂದ್ ಅಮೀನ್, ಚೇತನ್ ಶಂಕರಪುರ ಹಾಗೂ ಅಬ್ದುಲ್ ಹಮೀದ್ ಉಚ್ಚಿಲ ಇವರನ್ನು ಮಲಬಾರ್ ಗೋಲ್ಡ್ ವತಿಯಿಂದ ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ವಿನುತಾ ಕಿರಣ್, ಶ್ರೀನಿವಾಸ್ ಪ್ರಸಾದ್ ಮಯ್ಯ ಹಾಗೂ ಚೇತನ್ ಶಂಕರಪುರ ಇವರು ರಕ್ತದಾನದ ಅಗತ್ಯತೆ ಕುರಿತು ಮಾತನಾಡಿ, ಉಳಿದವರೂ ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯಸ್ಥ ಹಪೀಝ್ ರೆಹಮಾನ್, ಸಂಸ್ಥೆಯು ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಆದಾಯದ ಶೇ.5ರಷ್ಟನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದೆ. ಟ್ರಸ್ಟ್ ಆರಂಭವಾದಾಗಿನಿಂದ ದೇಶಾದ್ಯಂತ ಈವರೆಗೆ 282 ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಇಂಥ ಕಾರ್ಯಗಳಿಗೆ ವಿನಿಯೋಗಿಸಿದೆ. ಇವುಗಳಲ್ಲಿ ದೇಶದ 17 ರಾಜ್ಯಗಳ 95,000ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ 60 ಕೋಟಿ ರೂ.ಗಳಿಗೂ ಅಧಿಕ ವಿದ್ಯಾರ್ಥಿ ವೇತನವನ್ನು ವಿತರಿಸಿದೆ ಎಂದರು.
ಮಲಬಾರ್ ಗೋಲ್ಡ್‌ನ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಾ, ಎ.ಕೆ.ಗುರುರಾಜ್, ಮಾರ್ಕೆಟಿಂಗ್ ವ್ಯವಸ್ಥಾಪಕ ತಂಝೀಮ್ ಶಿರ್ವ ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.