
ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಅಂಗವಾಗಿ, ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಾಳೆ (ಆಗಸ್ಟ್ 15) ಸಾಮೂಹಿಕ ಶ್ರೀ ಕೃಷ್ಣ ಮಂತ್ರ ಜಪ ಪಠಣ ನಡೆಯಲಿದೆ. ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ಶ್ರೀ ಗೋವಿಂದ ಗಿರಿ ಮಹಾರಾಜರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 11.15 ರಿಂದ 12.15 ರವರೆಗೆ 1008 ಬಾರಿ ‘ಸ್ವಾಮಿ ಶ್ರೀ ಕೃಷ್ಣಾಯ ನಮಃ’ ಮಂತ್ರವನ್ನು ಸಾಮೂಹಿಕವಾಗಿ ಜಪಿಸಲಾಗುವುದು. ನಂತರ ಭೋಜನ ಪ್ರಸಾದ ವಿತರಣೆ ಇರಲಿದೆ. ಶ್ರೀ ಕೃಷ್ಣ ಭಕ್ತರು ತಮ್ಮ ಕುಟುಂಬ ಸಮೇತರಾಗಿ ಸಾಂಪ್ರದಾಯಿಕ ಉಡುಪುಗಳಲ್ಲಿ ಭಾಗವಹಿಸುವಂತೆ ಪುತ್ತಿಗೆ ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ. ಪುರುಷರು ಬಿಳಿ ಪಂಚೆ ಮತ್ತು ಅಂಗಿ, ಮಹಿಳೆಯರು ಕೇಸರಿ ಅಥವಾ ಹಸಿರು ಬಣ್ಣದ ಸೀರೆ ಅಥವಾ ಚೂಡಿದಾರ ಧರಿಸಿದರೆ ಉತ್ತಮ ಎಂದು ಸೂಚಿಸಲಾಗಿದೆ (ಕಡ್ಡಾಯವಲ್ಲ).