
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ದೂರುದಾರನಾದ ಚಿನ್ನಯ್ಯ ಅಲಿಯಾಸ್ ಮಾಸ್ಕ್‌ಮ್ಯಾನ್ ಮಾಡಿದ್ದ ಆರೋಪ ಈಗ ಹೊಸ ತಿರುವು ಪಡೆದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ಮುಂದೆ, ತಾನು ಹಣದ ಆಮಿಷ ಹಾಗೂ ಜೀವ ಬೆದರಿಕೆಯಿಂದ ಈ ರೀತಿ ಸುಳ್ಳು ಹೇಳಿದ್ದಾಗಿ ಚಿನ್ನಯ್ಯ ಒಪ್ಪಿಕೊಂಡಿದ್ದಾನೆ.
ತಲೆ ಬುರುಡೆ ಎಲ್ಲಿಂದ ತಂದಿದ್ದು ಎಂಬ ಕುರಿತು ವಿಚಾರಣೆ ನಡೆಸಿದಾಗ, ಚಿನ್ನಯ್ಯ ಮೊದಲಿಗೆ ತಂದಿದ್ದ ತಲೆ ಬುರುಡೆಯ ಮೂಲ ಯಾವುದು ಎಂಬುದು ಎಸ್‌ಐಟಿ ಅಧಿಕಾರಿಗಳಿಗೆ ತಿಳಿದುಬಂದಿದೆ. ಇದರ ಜೊತೆಗೆ, ಧರ್ಮಸ್ಥಳದ ವಿರುದ್ಧ ಸುಳ್ಳು ಹೇಳಿಕೆ ನೀಡಲು ಕೆಲವು ವ್ಯಕ್ತಿಗಳು ಚಿನ್ನಯ್ಯಗೆ ಹಣದ ಆಮಿಷ ಒಡ್ಡಿದ್ದರು ಎಂಬ ಸತ್ಯವನ್ನು ಆತ ಬಾಯ್ಬಿಟ್ಟಿದ್ದಾನೆ.
ಲಂಚ ಮತ್ತು ಜೀವ ಬೆದರಿಕೆಯ ಜಾಲ:
ಚಿನ್ನಯ್ಯನ ಹೇಳಿಕೆಯ ಪ್ರಕಾರ, ಹಂತ ಹಂತವಾಗಿ ಆತನಿಗೆ ಸುಮಾರು 3.5 ಲಕ್ಷದಿಂದ 4 ಲಕ್ಷ ರೂಪಾಯಿಯವರೆಗೆ ಹಣ ನೀಡಲಾಗಿದೆ. ಸುಳ್ಳು ಹೇಳಿಕೆಗಳನ್ನು ಹೇಳಿಕೊಟ್ಟು, ಅದನ್ನು ಮಾಧ್ಯಮಗಳ ಮುಂದೆ ಹೇಳುವಂತೆ ಪ್ರಚೋದಿಸಲಾಗಿದೆ. ಒಂದು ಹಂತದಲ್ಲಿ ಈ ಕಾರ್ಯದಿಂದ ದೂರ ಸರಿಯಲು ಚಿನ್ನಯ್ಯ ನಿರ್ಧರಿಸಿದಾಗ, ಆತನಿಗೆ ಜೀವ ಬೆದರಿಕೆ ಹಾಕಲಾಗಿದೆ.
“ನೀನು ನಾವು ಹೇಳಿದಂತೆ ಕೇಳದಿದ್ದರೆ, ನಿನ್ನ ವಿರುದ್ಧವೇ ಪ್ರಕರಣ ದಾಖಲಿಸಿ ಜೀವಾವಧಿ ಶಿಕ್ಷೆ ಆಗುವಂತೆ ಮಾಡುತ್ತೇವೆ ಎಂದು ಬೆದರಿಸಿದರು. ಇಲ್ಲವಾದರೆ, ಜನರೇ ನಿನಗೆ ಹೊಡೆದು ಹಾಕುತ್ತಾರೆಂದು ಹೆದರಿಸಿದರು,” ಎಂದು ಚಿನ್ನಯ್ಯ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ಚಿನ್ನಯ್ಯನ ಈ ಸ್ಫೋಟಕ ಹೇಳಿಕೆಯ ನಂತರ, ಎಸ್‌ಐಟಿ ಅಧಿಕಾರಿಗಳು ಸುಳ್ಳು ಆರೋಪಗಳಿಗೆ ಹಣ ನೀಡಿ ಪ್ರಚೋದಿಸಿದ ಮತ್ತು ಜೀವ ಬೆದರಿಕೆ ಹಾಕಿದ ವ್ಯಕ್ತಿಗಳ ಕುರಿತು ತೀವ್ರ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣ ಕೇವಲ ಸುಳ್ಳು ಆರೋಪಕ್ಕೆ ಸೀಮಿತವಾಗಿಲ್ಲದೆ, ಅದರ ಹಿಂದಿನ ಬೃಹತ್ ಷಡ್ಯಂತ್ರದ ಜಾಲವನ್ನು ಬಯಲಿಗೆಳೆಯುವತ್ತ ಸಾಗುತ್ತಿದೆ.