
ಬೆಳ್ತಂಗಡಿ: ವಿಪರೀತ ಹೊಟ್ಟೆನೋವಿನಿಂದ ವಿವಾಹಿತ ಮಹಿಳೆಯೊಬ್ಬರು ಅಚಾನಕ್ಕಾಗಿ ಮೃತಪಟ್ಟ ಘಟನೆ ಮರೋಡಿ ಗ್ರಾಮದಲ್ಲಿ ಸೋಮವಾರ (ಜುಲೈ 28, 2025) ನಡೆದಿದೆ.
ಮೃತಪಟ್ಟವರನ್ನು ಮರೋಡಿ ಗ್ರಾಮದ ಮೂಕಾಂಬಿಕಾ ನಿಲಯ, ಪಚ್ಚಡಿ ಮನೆಯ 26 ವರ್ಷದ ವಾಣಿಶ್ರೀ ಎಂದು ಗುರುತಿಸಲಾಗಿದೆ. ವಾಣಿಶ್ರೀ ಅವರಿಗೆ ಕಳೆದೊಂದು ವರ್ಷದ ಹಿಂದೆ ಮದುವೆಯಾಗಿತ್ತು. ಅವರು ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು ಎಂದು ತಿಳಿದುಬಂದಿದೆ.
ವಾಣಿಶ್ರೀ ಅವರಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಾಗ, ಪಕ್ಕದ ಮನೆಗೆ ತೆರಳಿದ್ದ ಅವರ ದೊಡ್ಡಮ್ಮನವರಿಗೆ ಅನುಮಾನ ಬಂದು ತಕ್ಷಣ ಅವರ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಎಲ್ಲರ ಸಹಾಯದಿಂದ ವಾಣಿಶ್ರೀಯವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ ಪ್ರಶಾಂತ್, ತಂದೆ ರಾಜು, ತಾಯಿ ಪ್ರೇಮ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.