
ಉಡುಪಿ, ಜನವರಿ 31: ಮಂತ್ರಾಲಯ ಶ್ರೀಪಾದರು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಉಡುಪಿಗೆ ಆಗಮಿಸಿದರು. ಪರ್ಯಾಯ ಅವಧಿಯಲ್ಲಿ ಪ್ರಥಮ ಬಾರಿಗೆ ಉಡುಪಿಗೆ ಭೇಟಿ ನೀಡಿದ ಶ್ರೀಪಾದರಿಗೆ ಶ್ರೀಕೃಷ್ಣ ಮಠದಲ್ಲಿ ಭಕ್ತಿ ಪೂರ್ವ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಪರ್ಯಾಯ ಶ್ರೀಪಾದರು ಆದರಭಾವದಿಂದ ಅವರನ್ನು ಬರಮಾಡಿಕೊಂಡರು.ನಂತರ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ದರ್ಶನ ಪಡೆದ ಶ್ರೀಪಾದರಿಗೆ ಗೌರವ ಪೂಜಾ ವಿಧಿ ನೆರವೇರಿಸಲಾಯಿತು. ಪರ್ಯಾಯ ಮಠದ ಶ್ರೀಗಳು ಮಂತ್ರಾಲಯ ಮತ್ತು ಪುತ್ತಿಗೆ ಮಠದ ನಡುವಿನ ಆಧ್ಯಾತ್ಮಿಕ ಸಂಬಂಧವನ್ನು ನೆನಪಿಸಿಕೊಂಡು, ಇದು ಸದಾಕಾಲ ಮುಂದುವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುಬುದೇಂದ್ರ ತೀರ್ಥ ಶ್ರೀಪಾದರು, ಮಂತ್ರಾಲಯ ಮತ್ತು ಪುತ್ತಿಗೆ ಮಠದ ಅನೇಕ ಯತಿಗಳ ಹೆಸರು ಒಂದೇ ರೀತಿಯಲ್ಲಿದೆ ಎಂದು ಉಲ್ಲೇಖಿಸಿದರು. ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಪೂರ್ವಿಕರಲ್ಲಿ ಒಬ್ಬರು ಎಂದು ಅವರು ಸ್ಮರಿಸಿದರು. ಪುತ್ತಿಗೆ ಶ್ರೀಗಳು ತಮ್ಮ ಅಣ್ಣನ ಸಮಾನ ಎಂದು ಹೇಳಿದ ಅವರು, ಈ ಬಾರಿ ಶೀಘ್ರ ಭೇಟಿ ನೀಡಿದರೂ ಮುಂದಿನ ಬಾರಿ ಸಂಸ್ಥಾನ ಸಮೇತ ಆಗಮಿಸುವುದಾಗಿ ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಈ ಸಂದರ್ಭದಲ್ಲಿ ಶ್ರೀಕೃಷ್ಣ ದರ್ಶನ ಪಡೆದರು. ಪರ್ಯಾಯ ಶ್ರೀಪಾದರು ಉಡುಪಿಯು, ಧರ್ಮಸ್ಥಳ ಹಾಗೂ ಮಂತ್ರಾಲಯದ ಮಹಾಸಂತರು ಒಂದೇ ವೇದಿಕೆಯಲ್ಲಿ ಸನ್ನಿಧಾನಗೊಂಡಿರುವುದು ತ್ರಿವೇಣಿ ಸಂಗಮವನ್ನು ನೆನಪಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಹೆಗ್ಗಡೆಯವರಿಗೂ ಉಭಯ ಶ್ರೀಪಾದರು ಗೌರವ ಸಲ್ಲಿಸಿ, ಆಶೀರ್ವಾದ ನೀಡಿದರು.
ಈ ಕಾರ್ಯಕ್ರಮದಲ್ಲಿ ದಿವಾನ ಶ್ರೀ ನಾಗರಾಜಾಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ ತಂತ್ರಿ, ಮಠದ ಪಂಡಿತರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.