
ಕೋಲಾರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಮಂಗಳವಾರ (ಜೂನ್ 10) ಮಾವಿನ ಬೆಲೆ ಕುಸಿತಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ ರೈತರು ಬಂದ್‌ಗೆ ಕರೆ ನೀಡಿದ್ದಾರೆ. ಒಂದು ಟನ್ ಮಾವು ಕೇವಲ ₹3,000–₹4,000 ರಲ್ಲಿಯೇ ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಆಂದ್ರಪ್ರದೇಶ ಮಾದರಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಲಾಗುತ್ತಿದೆ.
ಬಂದ್‌ಗೆ ಬೃಹತ್ ಬೆಂಬಲ ವ್ಯಕ್ತವಾಗಿದ್ದು, ಮಾವು ಬೆಳೆಗಾರರ ಜತೆಗೆ ಬಿಜೆಪಿ, ಜೆಡಿಎಸ್, ಮತ್ತು ಇತರ ರೈತಪರ ಸಂಘಟನೆಗಳು ಭಾಗವಹಿಸಿವೆ. ರೈತರು ಶ್ರೀನಿವಾಸಪುರ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಟನ್‌ಗಟ್ಟಲೆ ಮಾವನ್ನು ರಸ್ತೆಗೆ ಸುರಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.