
ಮಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಆತನ ಸಹಚರರ ಸಂಚು ಇದೀಗ ಬಯಲಾಗಿದ್ದು, ಸೌಜನ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಾದ ಚಿನ್ನಯ್ಯನ ಬಂಧನ ಮತ್ತು ಆತನ ತಪ್ಪೊಪ್ಪಿಗೆಯ ನಂತರ ಈ ಮಹತ್ವದ ವಿಷಯ ಬೆಳಕಿಗೆ ಬಂದಿದೆ.
ಸಂಶಯದ ಬೀಜ ಬಿತ್ತಿದ ತಿಮರೋಡಿ ಗ್ಯಾಂಗ್
ಮೂಲತಃ ತಮಿಳುನಾಡಿನ ಈರೋಡ್‌ನ ಸ್ಪಿನ್ನಿಂಗ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿನ್ನಯ್ಯ, ಉಜಿರೆಗೆ ಬಂದಾಗ ಸೌಜನ್ಯಾಳ ಸೋದರಮಾವ ವಿಠಲ್ ಗೌಡ ಅವರನ್ನು ಭೇಟಿಯಾಗಿದ್ದನು. ವಿಠಲ್ ಗೌಡ ಚಿನ್ನಯ್ಯನನ್ನು ಮಹೇಶ್ ಶೆಟ್ಟಿ ತಿಮರೋಡಿಯವರ ಬಳಿ ಕರೆದುಕೊಂಡು ಹೋದ ನಂತರ ಈ ಪ್ರಕರಣ ಹೊಸ ದಿಕ್ಕು ಪಡೆದುಕೊಂಡಿತು. ಚಿನ್ನಯ್ಯ ನದಿಯಲ್ಲಿ ತೇಲಿಬಂದ ಕೆಲವು ಅನಾಮಧೇಯ ಶವಗಳನ್ನು ಹೂತು ಹಾಕಿದ್ದರ ಬಗ್ಗೆ ತಿಮರೋಡಿಗೆ ಹೇಳಿದ್ದಾನೆ. ಈ ಮಾತನ್ನು ಬಂಡವಾಳ ಮಾಡಿಕೊಂಡ ತಿಮರೋಡಿ ಮತ್ತು ಆತನ ತಂಡ ಸೌಜನ್ಯ ಪ್ರಕರಣದಲ್ಲಿ ಹೊಸ ಸಂಶಯಗಳನ್ನು ಹುಟ್ಟುಹಾಕಲು ಯತ್ನಿಸಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ದುರ್ಬಲತೆಯ ಲಾಭ: ಊಟದ ಆಸೆ ತೋರಿಸಿ ಚಿನ್ನಯ್ಯನ ಬಳಕೆ
ಕಳೆದ 2 ವರ್ಷಗಳಿಂದ ಈರೋಡ್‌ಗೆ ಹಿಂತಿರುಗಿದ್ದ ಚಿನ್ನಯ್ಯನ ಜೊತೆ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್‌ನ ಅಜಯ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟನ್ನವರ್ ಸಂಪರ್ಕದಲ್ಲಿದ್ದರು. ಜೂನ್ 18ರಂದು ಚಿನ್ನಯ್ಯನನ್ನು ಮತ್ತೆ ಕರೆಸಿ, ನ್ಯಾಯಾಲಯದಲ್ಲಿ ಹೇಳಿಕೆ ನೀಡಲು ಪ್ರೇರೇಪಿಸಲಾಗಿದೆ. ಈ ಹೇಳಿಕೆಯನ್ನು ಜಯಂತ್ ಟಿ. ಎಂಬುವವರು ಸಿದ್ಧಪಡಿಸಿದ್ದಾರೆ ಎಂದು ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ. ದಿನಕ್ಕೆ 4 ಬಾರಿ ರುಚಿಕರವಾದ ಊಟ ಮಾಡುವ ಚಿನ್ನಯ್ಯನ ದುರ್ಬಲತೆಯನ್ನು ತಿಮರೋಡಿ ಗ್ಯಾಂಗ್ ಲಾಭ ಮಾಡಿಕೊಂಡಿತ್ತು.
ಸತ್ಯ ಬಯಲಿಗೆ: ಎಸ್ಐಟಿ ತನಿಖೆ ಮತ್ತು ವಕೀಲರ ಒತ್ತಡ
ಸರ್ಕಾರ ಎಸ್ಐಟಿ ರಚಿಸಿದ ನಂತರ ತನಿಖೆ ತೀವ್ರಗೊಂಡಿತು. ಚಿನ್ನಯ್ಯ ಸತ್ಯ ಹೇಳಲು ಪ್ರಯತ್ನಿಸಿದಾಗಲೆಲ್ಲಾ, ಅವನ ಸುತ್ತ ಇದ್ದ ವಕೀಲರು ಅದನ್ನು ತಡೆದಿದ್ದಾರೆ. ಒಂದು ದಿನ ವಕೀಲರು ಇಲ್ಲದಿದ್ದಾಗ, ಚಿನ್ನಯ್ಯ ಅಧಿಕಾರಿಗಳ ಮುಂದೆ ಸತ್ಯ ಹೇಳಲು ಮುಂದಾದನು. ಇದನ್ನು ತಿಳಿದ ತಿಮರೋಡಿ ರಾತ್ರಿ ಚಿನ್ನಯ್ಯನ ಮೇಲೆ ಹಲ್ಲೆ ನಡೆಸಿದ್ದನು. ಇದರಿಂದ ತಾನು ಒಂದು ದೊಡ್ಡ ಜಾಲದಲ್ಲಿ ಸಿಲುಕಿಕೊಂಡಿರುವುದು ಚಿನ್ನಯ್ಯನಿಗೆ ತಿಳಿಯಿತು.
ಎಸ್ಐಟಿ ತಂಡ ಗುಂಡಿಗಳನ್ನು ಅಗೆದು ತನಿಖೆ ನಡೆಸಿದರೂ ಯಾವುದೇ ಶವ ಸಿಗಲಿಲ್ಲ. ಇದರಿಂದ ತಿಮರೋಡಿ ಗ್ಯಾಂಗ್ ತೀವ್ರ ಒತ್ತಡಕ್ಕೆ ಸಿಲುಕಿದ್ದು, ಚಿನ್ನಯ್ಯನ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ತಿಮರೋಡಿ ಬಂಧನವಾದಾಗ, ಚಿನ್ನಯ್ಯನ ಮೇಲಿನ ವಕೀಲರ ಹಿಡಿತ ಕಡಿಮೆಯಾಯಿತು. ಶುಕ್ರವಾರ ಚಿನ್ನಯ್ಯನ ಜೊತೆ ಕೇವಲ ಒಬ್ಬ ವಕೀಲರು (ಸಚಿನ್ ದೇಶಪಾಂಡೆ) ಮಾತ್ರ ಇದ್ದರು. ಅದೇ ದಿನ ಮಧ್ಯಾಹ್ನ, ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಆರೋಪಿಯನ್ನಾಗಿ ವಶಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದರು.
ಶನಿವಾರ ಬೆಳಗಿನ ಜಾವ 5 ಗಂಟೆಗೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, 9 ಗಂಟೆಗೆ ಚಿನ್ನಯ್ಯನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಚಿನ್ನಯ್ಯ, “ನನಗೆ ಇಷ್ಟು ದಿನ ಜೊತೆಯಲ್ಲಿದ್ದ ವಕೀಲರು ಬೇಡ. ಸರ್ಕಾರಿ ವಕೀಲರನ್ನು ನೀಡಿ” ಎಂದು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಬಿಎನ್‌ಎಸ್ 183 ಹೇಳಿಕೆಯನ್ನು ದಾಖಲಿಸಲು ಸಾಧ್ಯವಿಲ್ಲದ ಕಾರಣ, ಮುಂದಿನ 2 ಅಥವಾ 3 ದಿನಗಳಲ್ಲಿ ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.