
ಮಂಗಳೂರು: ಬಜಪೆ ತಾಲೂಕಿನ ಕಿನ್ನಿಪದವಿಯಲ್ಲಿ ನಡೆದ ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಹಿನ್ನೆಲೆ ಈ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಯನ್ನು ಹಿತವಾಗಿ ಪರಿಗಣಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರು ಮೇ 2ರಿಂದ ಮೇ 6ರ ಬೆಳಿಗ್ಗೆ 6 ಗಂಟೆವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೆ ಆದೇಶಿಸಿದ್ದಾರೆ.
ಭದ್ರತೆ ದೃಷ್ಟಿಯಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೆ ನಿರ್ಧರಿಸಲಾಗಿದ್ದು, ಈ ಆದೇಶ ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ (ಭಾ.ನ್ಯಾಸು ಸಂ) ಸೆಕ್ಷನ್ 163 ರ ಪ್ರಕಾರ ಜಾರಿಗೊಂಡಿದೆ. ಈ ನಿರ್ಧಾರವನ್ನು ಕಮಿಷನರೇಟ್‌ನ ನಗರ ವಿಶೇಷ ವಿಭಾಗದ ಇನ್ಸ್ಪೆಕ್ಟರ್ ವರದಿ ಆಧರಿಸಿ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ನಿಷೇಧಾಜ್ಞೆಯ ಪ್ರಮುಖ ಅಂಶಗಳು:
- ಐದು ಅಥವಾ ಹೆಚ್ಚು ಜನರು ಗುಂಪು ಸೇರುವಂತಿಲ್ಲ.
- ಕೋಲು, ಕತ್ತಿ, ಚಾಕು, ಬಂದೂಕು, ಪಟಾಕಿ, ಸ್ಫೋಟಕಗಳು, ಆ್ಯಸಿಡ್ ಮುಂತಾದ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವುದು, ಸಾಗಿಸುವುದು, ಬಳಸುವುದು ಸಂಪೂರ್ಣ ನಿಷೇಧ.
- ವ್ಯಕ್ತಿಗಳ ಪ್ರತಿಕೃತಿ ಸುಡುವುದು, ಕಲ್ಲುಗಳನ್ನು ಎಸೆದು ಹಾನಿ ಮಾಡುವ ಸಾಧನಗಳನ್ನು ಒಯ್ಯುವುದು, ಶೇಖರಿಸುವುದು ಅಥವಾ ತಯಾರಿಸುವುದು ನಿಷೇಧ.
- ಸರ್ಕಾರಿ ಸಂಸ್ಥೆಗಳ ವಿರುದ್ಧ ನಿಂದನಾ ಘೋಷಣೆ, ಅವಾಚ್ಯ ಭಾಷೆ, ಪ್ರಚೋದನಾತ್ಮಕ ಭಾಷಣ, ಪ್ರತಿಭಟನೆ, ಗಾಯನ ಮುಂತಾದ ಚಟುವಟಿಕೆಗಳೂ ನಿಷೇಧಿಸಲಾಗಿದೆ.
- ಯಾವುದೇ ವಿಧದ ಸಾರ್ವಜನಿಕ ಉತ್ಕ್ರೋಶ ವ್ಯಕ್ತಪಡಿಸುವ ಚಟುವಟಿಕೆಗಳನ್ನು ನಿಯಂತ್ರಿಸಲು ನಿಷೇಧಾಜ್ಞೆ ಜಾರಿಗೊಂಡಿದೆ.
ಹತ್ಯೆ ಹಿನ್ನೆಲೆಯಲ್ಲಿ ನಗರದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿರುವುದು ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದೇಶ ಉಲ್ಲಂಘಿಸುವವರು ಕಾನೂನಿನಡಿಯಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆಯು ಎಚ್ಚರಿಕೆ ನೀಡಿದೆ.