
ಮಂಗಳೂರು: ನಗರದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಪಾಂಡೇಶ್ವರ ಪೊಲೀಸ್ ಠಾಣೆಯ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ಹರಿಶ್ಚಂದ್ರ ಬೇರಿಕೆ ಎಂಬುವವರು ಕದ್ರಿಯ ವ್ಯಾಸನಗರದಲ್ಲಿರುವ ತಮ್ಮ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ.
ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದವರಾದ ಹರಿಶ್ಚಂದ್ರ ಅವರು ಕಳೆದ ಕೆಲವು ಸಮಯದಿಂದ ಮಂಗಳೂರಿನಲ್ಲಿ ವಾಸವಿದ್ದರು. ರಜೆಯ ನಿಮಿತ್ತ ಅವರ ಪತ್ನಿ ಮತ್ತು ಮಕ್ಕಳು ಊರಿಗೆ ತೆರಳಿದ್ದರಿಂದ, ಘಟನೆ ಸಂಭವಿಸಿದ ವೇಳೆ ಅವರು ಮನೆಯಲ್ಲಿ ಒಬ್ಬರೇ ಇದ್ದರೆಂದು ತಿಳಿದುಬಂದಿದೆ. ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಸ್ಥಳೀಯರ ಸಮಯಪ್ರಜ್ಞೆ: ಬೆಳಿಗ್ಗೆ ಎಂದಿನಂತೆ ಮನೆಯ ಅಂಗಳದಲ್ಲಿ ಹೂವು ಬಿಡಿಸುತ್ತಾ ನೆರೆಹೊರೆಯವರ ಕಣ್ಣಿಗೆ ಬಿದ್ದಿದ್ದ ಹರಿಶ್ಚಂದ್ರ ಅವರು, ಕೆಲವೇ ಕ್ಷಣಗಳಲ್ಲಿ ಈ ನಿರ್ಧಾರ ಕೈಗೊಂಡಿರುವುದು ಸ್ಥಳೀಯರಿಗೆ ದಿಗ್ಭ್ರಮೆ ಮೂಡಿಸಿದೆ. ಮನೆಯೊಳಗೆ ಚೀರಾಟದ ಶಬ್ದ ಕೇಳುತ್ತಿದ್ದಂತೆ ಓಡಿಬಂದ ಅಕ್ಕಪಕ್ಕದ ನಿವಾಸಿಗಳು, ಅವರು ಬೆಂಕಿಯ ಜ್ವಾಲೆಯಲ್ಲಿರುವುದನ್ನು ಕಂಡು ತಕ್ಷಣ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಸ್ಥಳಕ್ಕೆ ಭೇಟಿ ನೀಡಿದ ಕದ್ರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಯ ಯತ್ನಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



































