
ಮಂಗಳೂರು: ನಗರದ ಹೊರವಲಯದಲ್ಲಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನೋರ್ವನನ್ನು “ಬಾಂಗ್ಲಾದೇಶಿ” ಎಂದು ತಪ್ಪಾಗಿ ಭಾವಿಸಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ರತೀಶ್ ದಾಸ್ ಅಲಿಯಾಸ್ ಲಾಲು (32), ಧನುಷ್ (24) ಮತ್ತು ಸಾಗರ್ (24) ಎಂದು ಗುರುತಿಸಲಾಗಿದೆ. ಜನವರಿ 11ರಂದು ಸಂಜೆ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಜಾರ್ಖಂಡ್‌ನ ದಿಲ್ಜಾನ್ ಅನ್ಸಾರಿ ಎಂಬುವವರನ್ನು ಅಡ್ಡಗಟ್ಟಿದ ಆರೋಪಿಗಳ ತಂಡ, ಅವರ ಧರ್ಮ ಮತ್ತು ರಾಷ್ಟ್ರೀಯತೆಯ ಬಗ್ಗೆ ವಿಚಾರಿಸಿದೆ. “ನೀನು ಬಾಂಗ್ಲಾದೇಶದವನು” ಎಂದು ಜನಾಂಗೀಯವಾಗಿ ನಿಂದಿಸಿ, ಕಟ್ಟಡ ನಿರ್ಮಾಣಕ್ಕೆ ಬಳಸುವ ತಾಪಿಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂತ್ರಸ್ತ ಕಾರ್ಮಿಕ ಅನ್ಸಾರಿ ಅವರ ಮೇಲೆ ಕೊಲೆ ಯತ್ನ ನಡೆಸಿದ ಗಂಭೀರ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



































