
ತಲಪಾಡಿ: ತಲಪಾಡಿಯಲ್ಲಿ ಆರು ಮಂದಿಯ ಸಾವಿಗೆ ಕಾರಣವಾದ ಭೀಕರ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಚಾಲಕ ನಿಜಲಿಂಗಪ್ಪ ಚಲವಾದಿ (47) ಅವರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಬಾಗಲಕೋಟೆಯ ಅಂಬೇಡ್ಕರ್ ನಗರದವರಾದ ನಿಜಲಿಂಗಪ್ಪ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆಗಸ್ಟ್ 28ರಂದು ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿತ್ತು. ಚಾಲಕನ ಅಜಾಗರೂಕತೆ ಮತ್ತು ಅತಿಯಾದ ವೇಗದಿಂದ ಬಸ್ ನಿಯಂತ್ರಣ ಕಳೆದುಕೊಂಡು ಮೊದಲು ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಆಟೋರಿಕ್ಷಾ ಚಾಲಕ ಸೇರಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ನಂತರ ಚಾಲಕ ನಿಜಲಿಂಗಪ್ಪ ತಕ್ಷಣ ಬಸ್‌ನಿಂದ ಇಳಿದು ಹೋಗಿದ್ದು, ಇಳಿಜಾರು ರಸ್ತೆಯಲ್ಲಿದ್ದ ಬಸ್ ಹಿಮ್ಮುಖವಾಗಿ ಚಲಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ಇತರ ಪ್ರಯಾಣಿಕರು ಮತ್ತು ಇನ್ನೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆ.
ಈ ಅಪಘಾತಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಬಸ್‌ನಲ್ಲಿ ಯಾವುದೇ ತಾಂತ್ರಿಕ ದೋಷ ಅಥವಾ ಬ್ರೇಕ್ ವೈಫಲ್ಯ ಇರಲಿಲ್ಲ ಎಂದು ತಿಳಿಸಿದ್ದಾರೆ. ಚಾಲಕನ ನಿರ್ಲಕ್ಷ್ಯ ಮತ್ತು ಅತಿ ವೇಗದ ಚಾಲನೆಯೇ ಈ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.