
ಮಂಗಳೂರು: ನಗರದ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬನಿಗೆ ಅದೇ ಜೈಲಿನಲ್ಲಿರುವ ಇತರ ಐವರು ವಿಚಾರಣಾಧೀನ ಕೈದಿಗಳು ಸೇರಿ ಹಲ್ಲೆ ನಡೆಸಿದ ಘಟನೆ ರವಿವಾರ ವರದಿಯಾಗಿದೆ.
ಹಲ್ಲೆಗೊಳಗಾದವರನ್ನು ವಿಚಾರಣಾಧೀನ ಕೈದಿ ಮುಹಮ್ಮದ್ ಇರ್ಷಾದ್ ಕಾಂತಡ್ಕ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ನರಿಂಗಾನದ ನಿಝಾಮ್ (27), ಕಾಟಿಪಳ್ಳದ ಶಾಕಿಬ್ (33), ಬಜಾಲ್‌ನ ರಿಫತ್ ಅಲಿ (29), ತಿರುವೈಲು ಗ್ರಾಮದ ಇಮ್ರಾನ್ (40) ಮತ್ತು ಬಂದರ್ ನಿವಾಸಿ ಅಬ್ದುಲ್ ರಶೀದ್ (33) ಎಂದು ಗುರುತಿಸಲಾಗಿದೆ. ಇವರೆಲ್ಲರೂ ವಿವಿಧ ಪ್ರಕರಣಗಳಲ್ಲಿ ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿ ಬಂಧಿಗಳಾಗಿದ್ದಾರೆ.
ಹಲ್ಲೆಗೆ ಕಾರಣ ಮತ್ತು ಮಾಹಿತಿ ಬಯಲು
ಕೈದಿಗಳ ನಡುವೆ ಹಣಕಾಸಿನ ವಿಚಾರವಾಗಿ ಮಾತಿಗೆ ಮಾತು ಬೆಳೆದು ಈ ಸಂಘರ್ಷ ನಡೆದಿದೆ ಎನ್ನಲಾಗಿದೆ. ಆರೋಪಿಗಳು ಮುಹಮ್ಮದ್ ಇರ್ಷಾದ್‌ನನ್ನು ನೆಲಕ್ಕೆ ದೂಡಿಹಾಕಿ, ಕಾಲುಗಳಿಂದ ತುಳಿದು ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಜೈಲು ಅಧೀಕ್ಷಕರು ಕೈದಿಗಳ ಆರೋಗ್ಯ ವಿಚಾರಿಸುತ್ತಿದ್ದ ಸಂದರ್ಭ, ಇರ್ಷಾದ್ ತನಗೆ ಹೊಟ್ಟೆ ನೋವು ಇದೆ ಎಂದು ಹೇಳಿದ್ದಾನೆ. ಆಗ ಅನುಮಾನಗೊಂಡ ಜೈಲು ಅಧೀಕ್ಷಕರು ಆತನನ್ನು ಕಚೇರಿಗೆ ಕರೆಸಿ ವಿಚಾರಿಸಿದಾಗ, ಆತನ ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಗಮನಕ್ಕೆ ಬಂದಿದೆ. ಈ ಕುರಿತು ವಿಚಾರಿಸಿದಾಗ ಆತ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಜೈಲು ಅಧೀಕ್ಷಕರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಜೈಲು ಅಧೀಕ್ಷಕರ ದೂರಿನ ಮೇರೆಗೆ ಬರ್ಕೆ ಪೊಲೀಸರು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.



































