
ಮಂಗಳೂರು : ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಸಂಘರ್ಷವನ್ನು ನೆಪವಾಗಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಗ್ಯಾಸ್ ಪಂಪ್‌ಗಳಲ್ಲಿ ಇಂಧನ ದರವನ್ನು ಅಕ್ರಮವಾಗಿ ಹೆಚ್ಚಿಸಿ ಸಾರ್ವಜನಿಕರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮಂಗಳೂರು ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದೆ. ಬೆಲೆ ಏರಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಹಗಲು ದರೋಡೆಯ ವಿರುದ್ಧ ಸಂಘಟನೆಯು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ಯುದ್ಧದ ಕಾರಣದಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂಬ ಸುಳ್ಳು ನೆಪಗಳನ್ನು ಹೇಳಿ, ಪಂಪ್ ಮಾಲೀಕರು ತಮಗೆ ಇಷ್ಟಬಂದ ದರವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಚಾಲಕರು ಮತ್ತು ಪಂಪ್ ಸಿಬ್ಬಂದಿಗಳ ನಡುವೆ ನಡೆದಿರುವ ವಾಗ್ವಾದದ ವೀಡಿಯೊಗಳು ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಮೂಡಿಸಿದೆ. ಸರ್ಕಾರದ ಯಾವುದೇ ಅಧಿಕೃತ ಆದೇಶವಿಲ್ಲದೆ ದರ ಏರಿಸುತ್ತಿರುವುದು ಕಾನೂನುಬಾಹಿರ ಎಂದು ಎಸ್‌ಡಿಟಿಯು ಮಂಗಳೂರು ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಕಾನ ಕಿಡಿಕಾರಿದ್ದಾರೆ.
ಈ ಹಿಂದೆ ಕೂಡ ದರ ಪರಿಷ್ಕರಣೆಯಾದಾಗ ಹಳೆಯ ದರವನ್ನೇ ಮುಂದುವರಿಸಿ ಗ್ರಾಹಕರಿಂದ ಹಣ ಲೂಟಿ ಮಾಡಿದ ಇತಿಹಾಸ ಇಂತಹ ಪಂಪ್‌ಗಳಿಗಿದೆ ಎಂದು ಅವರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಕೇವಲ ಸುತ್ತೋಲೆ ಹೊರಡಿಸುವುದಕ್ಕೆ ಸೀಮಿತವಾಗದೆ, ಮಾಧ್ಯಮಗಳ ಮೂಲಕ ಅಧಿಕೃತವಾಗಿ ಪರಿಷ್ಕೃತ ದರಗಳನ್ನು ಪ್ರಕಟಿಸಬೇಕು. ಆ ಮೂಲಕ ಜನಸಾಮಾನ್ಯರಿಗೆ ನಿಖರ ಮಾಹಿತಿ ತಲುಪಿಸಿ ಲೂಟಿಯನ್ನು ತಡೆಯಬೇಕು ಎಂದು ಇರ್ಫಾನ್ ಕಾನ ಆಗ್ರಹಿಸಿದ್ದಾರೆ. ಒಂದು ವೇಳೆ ಈ ಅಕ್ರಮ ವಸೂಲಿ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.



































