
ಮಂಗಳೂರು: ಉಡುಪಿಯ ವಿಶ್ವಪ್ರಸಿದ್ಧ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಸಡಗರ ಮನೆಮಾಡಿದ್ದು, ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತ ಆಮಂತ್ರಣ ನೀಡಲಾಗಿದೆ. ಶೀರೂರು ಮಠದ ಪರ್ಯಾಯೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಮಂಗಳೂರಿನಲ್ಲಿ ಡಿಸಿಎಂ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಿದರು.
ಮಂಗಳೂರಿನಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಆಮಂತ್ರಣವನ್ನು ಬಹು ಗೌರವದಿಂದ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು, ಉಡುಪಿಯ ಈ ಪವಿತ್ರ ಧಾರ್ಮಿಕ ವಿಧಿಯಲ್ಲಿ ಪಾಲ್ಗೊಳ್ಳಲು ತಮಗೆ ಹೆಚ್ಚಿನ ಆಸಕ್ತಿ ಇರುವುದಾಗಿ ತಿಳಿಸಿದರು. ಜನವರಿ 18ರಂದು ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಪೀಠಾರೋಹಣ ಮಾಡಲಿದ್ದು, ಈ ಸಂಭ್ರಮಕ್ಕೆ ಸಾಕ್ಷಿಯಾಗಲು ಸರ್ಕಾರಿ ಮಟ್ಟದ ಸಹಕಾರ ಮತ್ತು ವೈಯಕ್ತಿಕ ಪಾಲ್ಗೊಳ್ಳುವಿಕೆಯ ಭರವಸೆಯನ್ನು ಅವರು ನೀಡಿದರು.
ಈ ಸಂದರ್ಭದಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿಯ ಪ್ರಮುಖರಾದ ಜಯಪ್ರಕಾಶ್ ಕೆದ್ಲಾಯ, ವಿಷ್ಣುಮೂರ್ತಿ ಆಚಾರ್ಯ ಹಾಗೂ ಪ್ರಚಾರ ಸಮಿತಿಯ ಸಂಚಾಲಕ ನಂದನ್ ಜೈನ್ ಉಪಸ್ಥಿತರಿದ್ದು, ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಶೀರೂರು ಶ್ರೀಗಳ ಪರ್ಯಾಯ ಅವಧಿಯಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಉಡುಪಿ ನಗರ ಈಗಾಗಲೇ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ.



































