
ಮಂಗಳೂರು : ಮೇಲಾಧಿಕಾರಿಗಳು ಎಷ್ಟೇ ದಕ್ಷರಾಗಿದ್ದರೂ ಭ್ರಷ್ಟ ಅಧಿಕಾರಿಗಳು ತಮ್ಮ ಭ್ರಷ್ಟಾಚಾರ ಮುಂದುವರಿಸುತ್ತಾರೆ ಎಂಬುದಕ್ಕೆ ಮಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಐವರು ಪೊಲೀಸರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ವಾಹನ ಪರವಾನಗಿ ಮರಳಿ ನೀಡಲು ₹50,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಹೆಡ್‌ಕಾನ್ಸ್‌ಟೇಬಲ್ ತಸ್ಲಿಂ ಮತ್ತು ಸಹಕರಿಸಿದ ವಿನೋದ್ ನೇರ ಆರೋಪಿಗಳಾಗಿದ್ದು, ಅವರನ್ನು ತಕ್ಷಣವೇ ಅಮಾನತು ಮಾಡಲಾಗಿದೆ.
ಅಷ್ಟೇ ಅಲ್ಲದೆ, ತಸ್ಲಿಂ ಮತ್ತು ವಿನೋದ್ ಅವರ ಲಂಚದ ಬೇಡಿಕೆಯ ಬಗ್ಗೆ ಮಾಹಿತಿ ಇದ್ದರೂ, ಅದನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸದೆ ಮೌನ ವಹಿಸಿದ್ದ ಇನ್ನೂ ಮೂವರು ಪೊಲೀಸರನ್ನು ಸಹ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ: ನಂತೂರು ಸರ್ಕಲ್‌ನಲ್ಲಿ ಸಂಭವಿಸಿದ ಅಪಘಾತದ ಕುರಿತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ತಸ್ಲಿಂ, ಅಪಘಾತಕ್ಕೀಡಾದ ಕಾರು ಮತ್ತು ಅದರ ದಾಖಲಾತಿಗಳನ್ನು ಠಾಣೆಗೆ ತಂದುಕೊಡುವಂತೆ ವಾಹನ ಮಾಲಕರಿಗೆ ಸೂಚಿಸಿದ್ದರು. ಮಾಲಕರು ಅದರಂತೆ ಎಲ್ಲವನ್ನೂ ಠಾಣೆಗೆ ಒಪ್ಪಿಸಿದ್ದರು.
ನಂತರ, ತಮ್ಮ ಕಾರನ್ನು ಬಿಡಿಸಿಕೊಳ್ಳಲು ಹೋದಾಗ, ಹೆಡ್‌ಕಾನ್ಸ್‌ಟೇಬಲ್ ತಸ್ಲಿಂ ₹50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಾರಿನ ಮಾಲಕರು ಆರೋಪಿಸಿದ್ದಾರೆ. ಈ ಸಂಬಂಧ ಕಾರಿನ ಮಾಲಕರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ, ಲೋಕಾಯುಕ್ತ ಪೊಲೀಸರು ಕದ್ರಿ ಠಾಣೆಯ ಇಬ್ಬರು ಹೆಡ್‌ಕಾನ್ಸ್‌ಟೇಬಲ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಇಂದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ತಸ್ಲಿಂನನ್ನು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಹತ್ತಿಕ್ಕುವಲ್ಲಿ ಈ ಕ್ರಮವು ಮಹತ್ವದ್ದಾಗಿದೆ.