
ಬೆಳ್ತಂಗಡಿ : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂ.ಡಿ. ಅವರನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾನುವಾರ ವಿಚಾರಣೆ ನಡೆಸಲಾಯಿತು. ಪೊಲೀಸರು ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸಿ, ಅವರು ತಮ್ಮ ವಕೀಲರ ತಂಡದೊಂದಿಗೆ ಠಾಣೆಗೆ ಹಾಜರಾದರು.
ಈ ಪ್ರಕರಣವು ಸಮೀರ್ ವಿರುದ್ಧ ದಾಖಲಾದ ಸ್ವಯಂಪ್ರೇರಿತ (suo moto) ಪ್ರಕರಣದ ಭಾಗವಾಗಿದೆ. ಸಮಾಜದಲ್ಲಿ ಅಶಾಂತಿ ಮತ್ತು ಸುಳ್ಳು ಮಾಹಿತಿಯನ್ನು ಹರಡುವಂತಹ ವಿಷಯಗಳನ್ನು ಸಿದ್ಧಪಡಿಸಿ, ಪ್ರಸಾರ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಠಾಣೆಗೆ ಬಂದಿದ್ದ ಸಮೀರ್ ಜೊತೆ 3 ಮಂದಿ ವಕೀಲರೂ ಹಾಜರಿದ್ದರು. ತನಿಖಾಧಿಕಾರಿಗಳು ಈ ವಿಡಿಯೊ ಸೃಷ್ಟಿ ಮತ್ತು ಪ್ರಸಾರದ ಹಿಂದಿನ ಉದ್ದೇಶಗಳ ಬಗ್ಗೆ ಸಮೀರ್ ಅವರಿಂದ ವಿವರಣೆ ಪಡೆದಿದ್ದಾರೆ. ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ಮುಂದಿನ ದಿನಗಳಲ್ಲಿ ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆಯ ನಂತರ ಬೆಳ್ತಂಗಡಿ ಪೊಲೀಸ್ ಠಾಣೆಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.