
ಮಂಗಳೂರು : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಖತರ್‌ನಲ್ಲಿರುವ ಅಮೆರಿಕದ ವಾಯುನೆಲೆಯಲ್ಲಿ ನಡೆದ ದಾಳಿಯ ಪರಿಣಾಮವಾಗಿ ಖತರ್ ಮತ್ತು ಬಹರೈನ್ ತಮ್ಮ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಈ ನಿರ್ಧಾರದ ಪರಿಣಾಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಗಲ್ಫ್ ಗಮ್ಯಸ್ಥಾನಗಳ ವಿಮಾನಗಳ ಮೇಲೆ ನೇರವಾಗಿ ಪರಿಣಾಮ ಬೀರಿದೆ.
ಮೂಲಗಳ ಮಾಹಿತಿ ಪ್ರಕಾರ, ಮಂಗಳೂರಿನಿಂದ ದಮಾಮ್‌ಗೆ ಹೊರಡುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಮಧ್ಯದಲ್ಲಿ ಮಸ್ಕತ್‌ಗೆ ತಿರುಗಿಸಲಾಗಿದ್ದು, ಅಬುಧಾಬಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಮಸ್ಕತ್‌ಗೆ ತಿರುಗಿಸಲಾದ ವಿಮಾನದಲ್ಲಿನ ಪ್ರಯಾಣಿಕರು ಈಗಾಗಲೇ ಹಲವು ಗಂಟೆಗಳ ಕಾಲ ವಿಮಾನದಲ್ಲೇ ಇಳಿಯದೆ ಕಾಯುತ್ತಿದ್ದಾರೆ. ಅವರು ಹೊರಬರಲು ಸ್ಥಳೀಯ ಅಧಿಕಾರಿಗಳ ಅನುಮತಿ ಇನ್ನೂ ಲಭ್ಯವಾಗಿಲ್ಲ.
ವಿಮಾನ ಸಂಸ್ಥೆಗಳು ಪ್ರಯಾಣಿಕರೊಂದಿಗೆ ನೇರ ಸಂಪರ್ಕದಲ್ಲಿದ್ದು, ಮುಂದಿನ ತೀರ್ಮಾನಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಿವೆ. ಇದೇ ಸಮಯದಲ್ಲಿ , ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಸ್ಥಿತಿಯನ್ನು ವಿಮಾನಯಾನ ಸಂಸ್ಥೆಗಳ ಮೂಲಕ ಪೂರ್ವದಲ್ಲಿ ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.



































