
ಮಂಗಳೂರು: ಮಂಗಳೂರು ಮೂಲದ ಹೊಟೇಲ್ ಉದ್ಯಮಿ, ಮರೋಳಿ ನಿವಾಸಿ ನಿತಿನ್ ಪೂಜಾರಿ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ನಿತಿನ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ, ಬದಲಾಗಿ ಮಹಿಳೆಯೊಬ್ಬಳ ಸಂಬಂಧದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಅವರ ಗೆಳೆಯರು ಗಂಭೀರ ಆರೋಪ ಮಾಡಿದ್ದಾರೆ.
ಲಿವಿಂಗ್ ಟುಗೆದರ್, ಆನಂತರ ಸಾವು
ನಿತಿನ್‌ಗೆ ಓರ್ವ ಆಂಟಿ ಜೊತೆ ಸ್ನೇಹವಿತ್ತು. ಈ ಸ್ನೇಹ ನಂತರ ಪ್ರೀತಿಗೆ ತಿರುಗಿ ಮದುವೆಯಾಗುವ ಹಂತಕ್ಕೆ ತಲುಪಿತ್ತು ಎನ್ನಲಾಗಿದೆ. ಮದುವೆಗೂ ಮುನ್ನವೇ ಇವರು ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು ಎಂಬ ಚರ್ಚೆ ಆಪ್ತರ ವಲಯದಲ್ಲಿ ತೀವ್ರವಾಗಿ ನಡೆಯುತ್ತಿದೆ.
ನಿತಿನ್ ವಿಷ ಸೇವಿಸಿದ್ದಾರೆ ಎಂದು ಇದೇ ಮಹಿಳೆ ಹೊಟೇಲ್ ಸಿಬ್ಬಂದಿಗೆ ಕರೆ ಮಾಡಿದ್ದರಂತೆ. ನಿತಿನ್‌ರನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. “ವಿಷ ಸೇವಿಸಿದರೆ ಎಷ್ಟು ಗಂಭೀರವಾಗಿದ್ದರೂ ಒಂದೆರಡು ದಿನವಾದರೂ ಇರುತ್ತಾರೆ. ಆದರೆ ಇವರು ದಿಢೀರ್ ಸಾವನ್ನಪ್ಪಿದ್ದಾರೆ. ಇವರೇ ವಿಷ ಸೇವಿಸಿದ್ರಾ ಅಥವಾ ಇವರಿಗೆ ವಿಷ ಪ್ರಾಶನ ಮಾಡಲಾಯಿತಾ?” ಎಂಬ ಹಲವು ಅನುಮಾನಗಳು ಇದೀಗ ಹುಟ್ಟಿಕೊಂಡಿವೆ.
ಪೊಲೀಸ್ ಕಮಿಷನರ್ ಸ್ಪಷ್ಟನೆ
ಈ ಸಾವಿನ ಬಗ್ಗೆ ಅನುಮಾನಗಳಿದ್ದರೆ ಠಾಣೆಗೆ ಬಂದು ಮಾಹಿತಿ ನೀಡಿ, ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಆದರೆ, ನಿತಿನ್ ಅವರ ತಾಯಿ ದೂರು ನೀಡುವಾಗಲೂ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ ಎಂದು ಕಮಿಷನರ್ ಹೇಳಿದ್ದಾರೆ. ಒಟ್ಟಿನಲ್ಲಿ, ಈ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.