
ಮಂಗಳೂರು: ಕಳೆದ ಎರಡು ತಿಂಗಳಿಂದ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಗಿತಗೊಂಡಿದ್ದ ಕಟ್ಟಡ ಪರವಾನಗಿ ಪ್ರಕ್ರಿಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಈ ಸಂಬಂಧ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ನಡೆಸಿದ ನಿರಂತರ ಮನವಿ ಮತ್ತು ಒತ್ತಡಕ್ಕೆ ಮಣಿದಿರುವ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಯು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಅಧಿಕೃತ ಆದೇಶ ಹೊರಡಿಸಿದೆ.
ಸಮಸ್ಯೆಯ ಹಿನ್ನೆಲೆ ಏನು?
ರಾಜ್ಯ ಸರ್ಕಾರವು ಈ ಹಿಂದೆ ಚಾಲ್ತಿಯಲ್ಲಿದ್ದ ‘ನಿರ್ಮಾಣ- 2’ ತಂತ್ರಾಂಶವನ್ನು ಹಠಾತ್ತನೆ ಸ್ಥಗಿತಗೊಳಿಸಿ, ಅದರ ಬದಲಿಗೆ ‘ಯುನಿಫೈಡ್ ಲ್ಯಾಂಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ (ULMS) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿತ್ತು. ಆದರೆ, ಹೊಸ ತಂತ್ರಾಂಶವು ಪೂರ್ಣಪ್ರಮಾಣದಲ್ಲಿ ಕಾರ್ಯಗತವಾಗದ ಕಾರಣ ಮತ್ತು ಹಳೆಯ ವ್ಯವಸ್ಥೆಯೂ ಲಭ್ಯವಿಲ್ಲದಿದ್ದರಿಂದ ಕಟ್ಟಡ ಪರವಾನಗಿ ಪಡೆಯುವ ಪ್ರಕ್ರಿಯೆ ಸಂಪೂರ್ಣ ಸ್ತಬ್ಧವಾಗಿತ್ತು.
ಜನಸಾಮಾನ್ಯರ ಪರದಾಟ
ಈ ತಾಂತ್ರಿಕ ಎಡವಟ್ಟಿನಿಂದಾಗಿ ಸಾಮಾನ್ಯ ಜನರು ಮನೆ ಕಟ್ಟಲು, ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಅಥವಾ ವಾಣಿಜ್ಯ ಸಂಕೀರ್ಣಗಳ ಯೋಜನೆಗಳಿಗೆ ಪರವಾನಗಿ ಸಿಗದೆ ತಿಂಗಳುಗಟ್ಟಲೆ ಕಾಯುವಂತಾಗಿತ್ತು. ಇದು ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲದೆ, ಕಟ್ಟಡ ವಿನ್ಯಾಸಕರು, ಎಂಜಿನಿಯರ್‌ಗಳು ಹಾಗೂ ದಿನಗೂಲಿ ಕಾರ್ಮಿಕರ ಜೀವನೋಪಾಯದ ಮೇಲೂ ಗಂಭೀರ ಪರಿಣಾಮ ಬೀರಿತ್ತು. ಈ ಎಲ್ಲಾ ಅಂಶಗಳನ್ನು ಶಾಸಕರು ನಗರಾಭಿವೃದ್ಧಿ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದರು.
ವೃತ್ತಿಪರರ ಬೇಡಿಕೆಗೆ ಸ್ಪಂದನೆ
ತಂತ್ರಾಂಶದ ಸಮಸ್ಯೆಯ ಜೊತೆಗೆ, ಹೊಸ ವ್ಯವಸ್ಥೆಯಲ್ಲಿ ಡಿಪ್ಲೋಮಾ ಸಿವಿಲ್ ಎಂಜಿನಿಯರ್‌ಗಳನ್ನು ‘ಸೂಪರ್‌ವೈಸರ್’ ಎಂದು ಮರುನಾಮಕರಣ ಮಾಡಲಾಗಿತ್ತು. ಇದು ಅನುಭವಿ ವೃತ್ತಿಪರರಲ್ಲಿ ಅಸಮಾಧಾನ ಮೂಡಿಸಿತ್ತು. ಈ ಪದದ ಬದಲಿಗೆ ಗೌರವಯುತವಾದ ‘ಸಿವಿಲ್ ಎಂಜಿನಿಯರ್ಸ್’ ಎಂಬ ಪದವನ್ನೇ ಬಳಸಬೇಕೆಂದು ಶಾಸಕರು ಆಗ್ರಹಿಸಿದ್ದು, ಇಲಾಖೆಯು ಈ ಬೇಡಿಕೆಯನ್ನು ಶೀಘ್ರದಲ್ಲೇ ಈಡೇರಿಸುವ ಭರವಸೆ ನೀಡಿದೆ.
ಈ ಸಂದರ್ಭದಲ್ಲಿ ಎಂಜಿನಿಯರ್‌ಗಳಾದ ಜಿ. ಯೋಗೀಶ್ ಪೈ ಮತ್ತು ಮೊಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದು, ಶಾಸಕರ ಈ ಜನಪರ ಕಾಳಜಿಗೆ ಬೆಂಬಲ ವ್ಯಕ್ತಪಡಿಸಿದರು.




































