
ಮಂಡ್ಯ: ಏಕಕಾಲದಲ್ಲಿ ಮೂವರು ಯುವಕರನ್ನು ಮೋಸಗೊಳಿಸಿದ ಯುವತಿ ಮಾಡಿರುವ ಅವಾಂತರ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮದ್ದೂರು ತಾಲೂಕಿನ ಕೆಸ್ತೂರಿನ ವೈಷ್ಣವಿ ಎಂಬ ಯುವತಿ, ಮೊದಲು ಹಾಸನದ ರಘು ಎಂಬ ಯುವಕನೊಂದಿಗೆ ಪ್ರೀತಿಯ ನಾಟಕ ಆಡುತ್ತಿದ್ದಳು. ಆದರೆ ಅದೇ ವೇಳೆಗೆ ಶಿವು ಎಂಬ ಮತ್ತೊಬ್ಬ ಯುವಕನನ್ನೂ ಪ್ರೀತಿಯ ಬುಟ್ಟಿಗೆ ಕೆಡವಿಕೊಂಡಿದ್ದಳು. ರಘು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಧರ್ಮಸ್ಥಳದಲ್ಲಿ ಮದುವೆ ಸಿದ್ಧತೆ ನಡೆಸಿದಾಗ, ರಾತ್ರಿ ಗಂಡನ ಮನೆಯಿಂದ ಚಿನ್ನ, ಸೀರೆ, ಹಣದೊಂದಿಗೆ ನಾಪತ್ತೆಯಾಗಿದ್ದಳು.
ನಂತರ ಶಿವು ಎಂಬ ಯುವಕನನ್ನು ಮದುವೆಯಾಗಿದ್ದರೂ, ಒಂದು ವರ್ಷದೊಳಗೆ ಆ ಸಂಬಂಧ ತೊಂದರೆಗೆ ತುತ್ತಾಗಿ ತವರು ಮನೆ ಸೇರಿಕೊಂಡಿದ್ದಳು. ಈ ಬಳಿಕ ಶಶಿ ಎಂಬ ಇನ್ನೊಬ್ಬ ಯುವಕನನ್ನು “ನಾನು ಬೆಂಗಳೂರಿನಲ್ಲಿ ಓದುತ್ತಿದ್ದೇನೆ” ಎಂದು ಮೋಸಗೊಳಿಸಿ, ಆತನೊಂದಿಗೆ ಆದಿಚುಂಚನಗಿರಿಯಲ್ಲಿ ಮದುವೆಯಾಗಿದ್ದಳು. ಮದುವೆಯಾದ ಬಳಿಕ “ಓದಲು ಬೆಂಗಳೂರಿಗೆ ಹಿಂತಿರುಗುತ್ತೇನೆ” ಎಂದು ಹೇಳಿ ಶಶಿಯಿಂದ ಪ್ರತಿ ತಿಂಗಳು ಹಣ ಪಡೆದು 15 ಲಕ್ಷ ರೂಪಾಯಿ ವಂಚಿಸಿದ್ದಳು. ಶಶಿಗೆ ಅನುಮಾನ ಬಂದು ಬಳಿಕ ವಿಚಾರಣೆ ನಡೆಸಿದಾಗ ಈಕೆಯ ನಿಜ ಸ್ವರೂಪ ಪತ್ತೆಯಾಗಿದೆ.
ಈಗ ಶಶಿ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.