
ಮಂಚೇನಹಳ್ಳಿ: ಭಾರತದ 77ನೇ ಗಣರಾಜ್ಯೋತ್ಸವ ಸಂಭ್ರಮದ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಅಚಾತುರ್ಯವೊಂದು ಸಂಭವಿಸಿದೆ. ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಅಧಿಕೃತ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸುವ ಮೂಲಕ ರಾಷ್ಟ್ರಗೌರವಕ್ಕೆ ಧಕ್ಕೆ ತಂದಿರುವ ಘಟನೆ ವರದಿಯಾಗಿದೆ.
ಸ್ಥಳೀಯ ಸರ್ಕಾರಿ ಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಈ ಸಮಾರಂಭದಲ್ಲಿ ತಹಶೀಲ್ದಾರ್ ಪೂರ್ಣಿಮಾ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜ ಸ್ತಂಭದ ಮೇಲೆ ಏರುತ್ತಿದ್ದಂತೆ ಕೇಸರಿ ಬಣ್ಣ ಕೆಳಭಾಗದಲ್ಲಿರುವುದು ಜನರ ಗಮನಕ್ಕೆ ಬಂದಿದ್ದು, ಕ್ಷಣಕಾಲ ಅಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿತು. ಗಣರಾಜ್ಯೋತ್ಸವದಂತಹ ಪವಿತ್ರ ದಿನದಂದು ಜವಾಬ್ದಾರಿಯುತ ಅಧಿಕಾರಿಗಳ ಸಮ್ಮುಖದಲ್ಲೇ ಇಂತಹ ತಪ್ಪು ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಧ್ವಜ ಕಟ್ಟುವ ಸಂದರ್ಭದಲ್ಲಿ ಸಿಬ್ಬಂದಿಗಳು ತೋರಿದ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಮೂಲ ಎಂದು ಹೇಳಲಾಗುತ್ತಿದೆ.



































