
ಶಿವಮೊಗ್ಗ: ಶುಕ್ರವಾರ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆಯಲ್ಲಿ ನಡೆದಿದೆ.
ಹತ್ಯೆಯಾಗಿರುವವರು ಹೇಮಣ್ಣ (68) ಎಂದು ಗುರುತಿಸಲಾಗಿದೆ. ಇವರ ಮೇಲೆ ಇದೇ ಪ್ರದೇಶದಲ್ಲಿ ಇದಕ್ಕೂ ಮುನ್ನವೂ ದಾಳಿ ನಡೆದಿದ್ದು, ಆ ಸಂದರ್ಭದಲ್ಲಿ ಅವರು ಅಲ್ಪ ಅಂತರದಲ್ಲಿ ಪಾರಾಗಿದ್ದರು. ಆದರೆ ಈ ಬಾರಿ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಸ್ಥಳೀಯರ ಮಾಹಿತಿಯಂತೆ, ಹೇಮಣ್ಣರು ಪ್ರತಿದಿನದಂತೆ ಬೆಳಿಗ್ಗೆ ವಾಕಿಂಗ್ ಹೋಗಿದ್ದ ವೇಳೆ ಅಪರಿಚಿತ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿದ್ದಾರೆ.
ಘಟನೆಯ ಮಾಹಿತಿ ಪಡೆದ ಹೊಳೆಹೊನ್ನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.