
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಸೋಮವಾರ (ಮೇ 27) ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಕೊಳತ್ತಮಜಲು ನಿವಾಸಿ ಹಾಗೂ ಪಿಕಪ್ ಚಾಲಕನ ಸಹೋದರ ರಹೀಮ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ರಹೀಮ್ ಇಂದು ಬೆಳಿಗ್ಗೆ ಇರಾಕೋಡಿಯಲ್ಲಿರುವ ಪ್ರದೇಶದಲ್ಲಿ ಪಿಕಪ್ ವಾಹನದಿಂದ ಮರಳು ಅನ್‌ಲೋಡ್ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ತೀವ್ರವಾದ ದಾಳಿ ನಡೆಸಿ ರಹೀಮನ್ನು ಸ್ಥಳದಲ್ಲೇ ಕಡಿದು ಪರಾರಿಯಾಗಿದ್ದಾರೆ. ಈ ಸಮಯದಲ್ಲಿ ರಹೀಮ್ ಜೊತೆ ಇದ್ದ ಮತ್ತೊಬ್ಬ ವ್ಯಕ್ತಿಗೂ ಕಡಿದ ಗಾಯವಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ವ್ಯಕ್ತಿಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.
ಘಟನೆಯ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ಕೈಗೆತ್ತಿಕೊಂಡಿದ್ದಾರೆ. ಹತ್ಯೆಯ ಹಿನ್ನೆಲೆ ಹಾಗೂ ದಾಳಿ ನಡೆಸಿದವರ ಗುರುತು ಪತ್ತೆ ಹಚ್ಚುವ ಕೆಲಸ ಮುಂದುವರೆದಿದೆ.