
ಕೋಲ್ಕತಾ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ವಕ್ಸ್ ತಿದ್ದುಪಡಿ ಕಾಯ್ದೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಟ್ಟುನಿಟ್ಟಿನ ಉತ್ತರವನ್ನೂ, ಖಡಕ್ ನಿರ್ಣಯವನ್ನೂ ಪ್ರಕಟಿಸಿದ್ದಾರೆ. “ಈ ತಿದ್ದುಪಡಿ ರಾಜ್ಯದಲ್ಲಿ ಜಾರಿಗೆ ಬರದು” ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಕೋಲ್ಕತಾದಲ್ಲಿ ಜೈನ ಸಮುದಾಯ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ದೀದಿ ಇರುವವರೆಗೆ ಅಲ್ಪಸಂಖ್ಯಾತರು ಹಾಗೂ ಅವರ ಆಸ್ತಿಗಳು ಸುರಕ್ಷಿತವಾಗಿರುತ್ತವೆ. ದೇಶ ವಿಭಜನೆಯ ಬಳಿಕ ಇಲ್ಲಿಯೇ ಉಳಿದಿರುವವರನ್ನು ರಕ್ಷಿಸುವುದು ನಮ್ಮ ಕರ್ತವ್ಯ” ಎಂದು ಭರವಸೆ ನೀಡಿದರು.
ಮುರ್ಶಿದಾಬಾದ್‌ನಲ್ಲಿ ಈ ಕಾಯ್ದೆ ಹಿನ್ನೆಲೆ ಗಲಭೆಗಳು ಸಂಭವಿಸಿರುವುದನ್ನು ಉಲ್ಲೇಖಿಸಿದ ಮಮತಾ, “ಪ್ರಚೋದನೆಗೆ ಒಳಗಾಗಬೇಡಿ. ರಾಜಕೀಯ ಲಾಭಕ್ಕಾಗಿ ಸಮಾಜವನ್ನು ವಿಭಾಗಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಎಚ್ಚರಿಸಿದರು.
ಮಮತಾ ಬ್ಯಾನರ್ಜಿ ತಮ್ಮ ಭಾಷಣದಲ್ಲಿ, “ನನ್ನ ಆಸ್ತಿಯ ಮೇಲೆಯೂ ಯಾರಿಗೂ ಹಕ್ಕಿಲ್ಲ. ಹಾಗೆಂದರೆ, ಇತರರ ಆಸ್ತಿಯನ್ನೂ ಕಸಿದುಕೊಳ್ಳಲು ನಾನು ಬಿಡುವುದಿಲ್ಲ. ರಾಜ್ಯದಲ್ಲಿ ಶೇಕಡಾ 33ರಷ್ಟು ಮುಸ್ಲಿಮರು ಶತಮಾನಗಳಿಂದ ನೆಲೆಸಿದ್ದಾರೆ. ಅವರ ರಕ್ಷಣೆ ನನ್ನ ಜವಾಬ್ದಾರಿ,” ಎಂದು ಹೇಳಿದರು.
ಬಿಜೆಪಿಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, “ಇಲ್ಲಿ ಹಿಂದೂಗಳು ಅಸುರಕ್ಷಿತರಂತೆ ಹೇಳುತ್ತಿದ್ದಾರೆ. ಆದರೆ ನಾವೆಲ್ಲರೂ ಈ ಮಣ್ಣಿನ ಮಕ್ಕಳೇ. ಎಲ್ಲರ ಭದ್ರತೆಯೂ ಮುಖ್ಯವಾಗಿದೆ ,” ಎಂದು ಹೇಳಿದರು.
ವಿವಾದಿತ ವಕ್ಸ್ ತಿದ್ದುಪಡಿ ಎಷ್ಟರ ಮಟ್ಟಿಗೆ ಬದಲಾವಣೆ ತರುತ್ತದೆ?
ಹೊಸ ತಿದ್ದುಪಡಿ ಕಾಯ್ದೆಯ ಪ್ರಕಾರ, ವಕ್ಸ್ ಮಂಡಳಿ ಅಥವಾ ನ್ಯಾಯಮಂಡಳಿ ಯಾವುದೇ ಆಸ್ತಿಯನ್ನು ವಕ್ಸ್ ಆಸ್ತಿ ಎಂದು ಘೋಷಿಸಲು ಸಾಕ್ಷ್ಯ ದಾಖಲೆಗಳನ್ನು ಒದಗಿಸಬೇಕಾಗಿದೆ. ಆದರೂ ಅಂತಿಮ ನಿರ್ಧಾರ ಸರ್ಕಾರದ ಕೈಯಲ್ಲಿದೆ. ಹಿಂದಿನಂತೆ ನ್ಯಾಯಮಂಡಳಿಯ ತೀರ್ಪು ಅಂತಿಮವೆಂದು ಪರಿಗಣಿಸುವ ನಿಯಮ ಈಗ ಇಲ್ಲ. ಹೀಗಾಗಿ, ನ್ಯಾಯಾಂಗದ ಹಸ್ತಕ್ಷೇಪಕ್ಕೂ ಅವಕಾಶ ಇದೆ.
ಈ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮ್ಯಾರಥಾನ್ ಚರ್ಚೆಗಳ ಬಳಿಕ ಅಂಗೀಕರಿಸಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ತಿದ್ದುಪಡಿಗೆ ಸಹಿ ಹಾಕಿದ್ದಾರೆ.