
ಮಲ್ಪೆ: ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟಿರುವ ಕರುಣಾಜನಕ ಘಟನೆ ಮಲ್ಪೆ ಸಮುದ್ರ ವ್ಯಾಪ್ತಿಯಲ್ಲಿ ಸಂಭವಿಸಿದೆ. ಉಡುಪಿಯ ಈಶ್ವರನಗರ ನಿವಾಸಿ ರಮೇಶ್ ಮೆಂಡನ್ (66) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.
ಮಾರ್ಚ್ 5 ರಂದು ಬೆಳಿಗ್ಗೆ ಸುಮಾರು 10 ಗಂಟೆಯ ಸುಮಾರಿಗೆ ರಮೇಶ್ ಮೆಂಡನ್ ಅವರು ಸಹೋದ್ಯೋಗಿಗಳೊಂದಿಗೆ ಸಮುದ್ರ ಮಧ್ಯೆ ಮೀನುಗಾರಿಕೆಯಲ್ಲಿ ನಿರತರಾಗಿದ್ದಾಗ ಈ ಅವಘಡ ಸಂಭವಿಸಿದೆ. ಕೆಲಸದ ನಡುವೆ ಆಯತಪ್ಪಿ ಅವರು ನೀರಿಗೆ ಬಿದ್ದಿದ್ದನ್ನು ಗಮನಿಸಿದ ಕೂಡಲೇ ಬೋಟಿನಲ್ಲಿದ್ದ ಇತರ ಮೀನುಗಾರರು ಅವರನ್ನು ರಕ್ಷಿಸಿ ಮೇಲೆಕ್ಕೆತ್ತಿದ್ದಾರೆ. ತಕ್ಷಣವೇ ಆಂಬುಲೆನ್ಸ್ ಮೂಲಕ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಸುಮಾರು 66 ವರ್ಷ ಪ್ರಾಯದ ರಮೇಶ್ ಅವರು ದೀರ್ಘಕಾಲದಿಂದ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಈ ಘಟನೆ ಮೀನುಗಾರಿಕಾ ವಲಯದಲ್ಲಿ ಶೋಕದ ಛಾಯೆ ಮೂಡಿಸಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.



































