
ಕೊಪ್ಪ : ಸೆಪ್ಟೆಂಬರ್ 2ರಂದು ನಡೆದ ಕೊಪ್ಪ ತಾಲ್ಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಮುದಾಯದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಕೊಪ್ಪ ತಾಲೂಕಿನ ಸಕ್ರೆಬೈಲ್ ಗ್ರಾಮೀಣ ಭಾಗದ ಮೂಲದವರಾದ, ಕರಾವಳಿಯಲ್ಲಿ ಸ್ಥಾಪಿತ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್.ಎಲ್. ಅವರನ್ನು ಗೌರವಿಸಲಾಯಿತು.
“ಮಲ್ನಾಡ್ ಐಕಾನ್” ಎಂದೇ ಗುರುತಿಸಿಕೊಂಡಿರುವ ಅಶ್ವತ್ ಎಸ್.ಎಲ್. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಇಂದು ಕೇವಲ ಕರ್ನಾಟಕದಲ್ಲೇ ಅಲ್ಲ, ದೇಶದ ಅನೇಕ ಭಾಗಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಿ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನೈತಿಕ ಮೌಲ್ಯಗಳು ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಅವರ ಪಾತ್ರ ಅಪಾರ. ಗ್ರಾಮೀಣ ಪ್ರದೇಶದಲ್ಲಿದ್ದರೂ ಅಂತರಾಷ್ಟ್ರೀಯ ಮಟ್ಟದ ಅವಕಾಶಗಳನ್ನು ಒದಗಿಸುವ ದೃಷ್ಟಿಕೋನ ಅವರನ್ನು ಇತರರಿಂದ ವಿಭಿನ್ನರನ್ನಾಗಿಸಿದೆ. ಈ ಶ್ರೇಷ್ಠ ಸೇವೆಯನ್ನೇ ಶ್ಲಾಘಿಸಿ ಒಕ್ಕಲಿಗ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ನನ್ನ ಸಾಧನೆಗೆ ಮಲೆನಾಡಿನ ಪರಿಸರ ಮತ್ತು ಜನರ ಪ್ರೇರಣೆಯೇ ಕಾರಣ. ಮುಂದಿನ ದಿನಗಳಲ್ಲಿ ಈ ಭಾಗದಲ್ಲೇ ಉತ್ತಮ ಶಿಕ್ಷಣ ಸಂಸ್ಥೆ ನಿರ್ಮಿಸುವ ಕನಸು ಇದೆ. ದೇವರಿಗೆ ಸಲ್ಲಿಸುವ ಸೇವೆ ದೇವರಿಗೆ ತಲುಪುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಅಶಕ್ತರಿಗೆ ಮಾಡುವ ಸೇವೆಯ ಪ್ರತಿಯೊಂದು ಕಣವೂ ದೇವರಿಗೆ ಸೇರುತ್ತದೆ. ಆರೋಗ್ಯ ಮತ್ತು ಶಿಕ್ಷಣ ಸೇವೆಯಲ್ಲಿ ಸಮುದಾಯ ತೊಡಗಿಸಿಕೊಳ್ಳುವುದು ಮಾದರಿಯಾಗಬೇಕು. ಎಲ್ಲರೊಳಗೂ ಒಂದಾಗಿ ಬದುಕಬೇಕು” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಸಕರಾದ ಟಿ.ಡಿ. ರಾಜೇಗೌಡ, ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿ.ಸಿ. ಭಗವಾನ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸಹದೇವ್ ಬಾಲಕೃಷ್ಣ, ಉಪಾಧ್ಯಕ್ಷರಾದ ಹೆಚ್.ಜೆ. ರಾಜಗೋಪಾಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.