
ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಅವರು, ಧರ್ಮಸ್ಥಳದಲ್ಲಿ 2006 ರಿಂದ 2010ರ ಅವಧಿಯಲ್ಲಿ ನಡೆದ ನಾಲ್ಕು ಅಪರಿಚಿತ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಕೋರಿ ವಿಶೇಷ ತನಿಖಾ ದಳದ (SIT) ಕಚೇರಿಗೆ ದೂರು ನೀಡಿದ್ದಾರೆ. ಈ ಸಾವುಗಳು ಕೊಲೆಗಳಾಗಿರುವ ಸಾಧ್ಯತೆ ಇದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿಯ SIT ಕಚೇರಿಗೆ ಗುರುವಾರ ರಾತ್ರಿ ಭೇಟಿ ನೀಡಿದ ತಿಮರೋಡಿ, ಮಾಹಿತಿ ಹಕ್ಕು ಕಾಯ್ದೆಯ (RTI) ಅಡಿಯಲ್ಲಿ ಪಡೆದ ದಾಖಲೆಗಳನ್ನು ದೂರಿನ ಜೊತೆಗೆ ಸಲ್ಲಿಸಿದ್ದಾರೆ. ಧರ್ಮಸ್ಥಳದ ಗಾಯತ್ರಿ, ಶರಾವತಿ ಮತ್ತು ವೈಶಾಲಿ ವಸತಿ ಗೃಹಗಳಲ್ಲಿ ನಡೆದ ಈ ಸಾವುಗಳನ್ನು “ಅಪರಿಚಿತ ಶವ” ಎಂದು ಪರಿಗಣಿಸಿ, ಗ್ರಾಮ ಪಂಚಾಯತ್ ಮೂಲಕ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಪ್ರಕರಣಗಳನ್ನು ಕೇವಲ “ಅಸ್ವಾಭಾವಿಕ ಮರಣ ವರದಿ” (UDR) ಎಂದು ಮಾತ್ರ ದಾಖಲಿಸಲಾಗಿದೆ. ಈ ಸಾವುಗಳ ಬಗ್ಗೆ ಕೊಲೆ ಅಥವಾ ಆತ್ಮಹತ್ಯೆಯ ಸಂಶಯಗಳಿದ್ದರೂ, ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ತಿಮರೋಡಿ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ. ಈ ಸಾವುಗಳ ಬಗ್ಗೆ ತಕ್ಷಣವೇ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಅವರು SIT ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ತಿಮರೋಡಿ ಅವರು ಸಲ್ಲಿಸಿದ ದೂರಿನ ಪ್ರಮುಖ ಅಂಶಗಳನ್ನು SIT ತಂಡವು ಪರಿಶೀಲಿಸುತ್ತಿದೆ. ಈ ದೂರಿನ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿದೆ.