
ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಓರ್ವ ಸಚಿವರು ತಮ್ಮ ಮೊಬೈಲ್ ಫೋನ್‌ನಲ್ಲಿ ‘ರಮ್ಮಿ’ ಗೇಮ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP – ಅಜಿತ್ ಪವಾರ್ ಬಣ) ದ ಕೃಷಿ ಸಚಿವ ಮಾಣಿಕ್‌ರಾವ್ ಕೊಕಾಟೆ ಅವರು ಸದನದ ಮಹತ್ವದ ಕಲಾಪದ ವೇಳೆ ಮೊಬೈಲ್ ಗೇಮ್‌ನಲ್ಲಿ ಮಗ್ನರಾಗಿರುವುದು ಕಂಡುಬಂದಿದೆ.
ಭಾನುವಾರ (ಜುಲೈ 20) ರಂದು ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್‌ಚಂದ್ರ ಪವಾರ್ ಬಣ) ದ ನಾಯಕ ರೋಹಿತ್ ಪವಾರ್ ಅವರು ಆಡಳಿತಾರೂಢ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಧಿವೇಶನದ ಸಮಯದಲ್ಲಿ ಮಾಣಿಕ್‌ರಾವ್ ಕೊಕಾಟೆ ರಮ್ಮಿ ಆಡುತ್ತಿರುವ ದೃಶ್ಯವನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರೋಹಿತ್ ಪವಾರ್ ಅವರು ತಮ್ಮ ಟಿಪ್ಪಣಿಯಲ್ಲಿ, “ಅಧಿಕಾರದಲ್ಲಿರುವ ರಾಷ್ಟ್ರೀಯವಾದಿ ಬಣವು ಬಿಜೆಪಿ ಸರ್ಕಾರದ ಅನುಮತಿಯಿಲ್ಲದೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕೃಷಿ ಕ್ಷೇತ್ರವು ಅಸಂಖ್ಯಾತ ಸಮಸ್ಯೆಗಳಿಂದ ಬಳಲುತ್ತಿದೆ ಮತ್ತು ಪ್ರತಿದಿನ ಸುಮಾರು 8 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಸಚಿವರಿಗೆ ಬೇರೇನೂ ಮಾಡಲು ಸಾಧ್ಯವಾಗದೆ, ರಮ್ಮಿ ಆಡಲು ಸಮಯ ಸಿಕ್ಕಂತೆ ಕಾಣುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ.
“ಈ ದಾರಿ ತಪ್ಪಿದ ಸಚಿವರು ಮತ್ತು ಸರ್ಕಾರವು ರೈತರ ಬೆಳೆ ವಿಮೆ, ಸಾಲ ಮನ್ನಾ ಮತ್ತು ಬೆಂಬಲ ಬೆಲೆಯಂತಹ ಪ್ರಮುಖ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಒಮ್ಮೆ ಬಡ ರೈತರ ಹೊಲಗಳಿಗೂ ಭೇಟಿ ನೀಡಿ, ಮಹಾರಾಜರೇ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕ ವಲಯದಲ್ಲಿ ಹಾಗೂ ರೈತ ಸಮುದಾಯದಲ್ಲಿ ಸಚಿವರ ವರ್ತನೆ ಕುರಿತು ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.