


ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇಂದು (ಬುಧವಾರ) ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಕೈಗೊಳ್ಳಲು ಆಗಮಿಸಿದ್ದಾರೆ. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಭಕ್ತರ ಓಡಾಟಕ್ಕೆ ಅನುಕೂಲವಾಗಲು, ತ್ರಿವೇಣಿ ಮಾರ್ಗ ಮತ್ತು ಕಾಳಿ ಮಾರ್ಗ ಸೇರಿದಂತೆ ಸಂಗಮದ ಸುತ್ತಮುತ್ತಲಿನ ರಸ್ತೆಗಳಲ್ಲಿನ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಭದ್ರತಾ ಸಿಬ್ಬಂದಿ ಹೆಚ್ಚಿಸಲಾಗಿದ್ದು, 5,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಅಘಾಡಗಳ ನಿರ್ಧಾರ: ಅಮೃತ ಸ್ನಾನ ರದ್ದು
ಮೌನಿ ಅಮಾವಾಸ್ಯೆಯ ಕುಂಭಸ್ನಾನವನ್ನು 13 ಅಘಾಡಗಳು ರದ್ದು ಮಾಡಿವೆ. ವಿಐಪಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದಾಗಿ ಜನಜಂಗುಳಿ ಏರ್ಪಟ್ಟಿದೆ. ಮಹಾಮಂಡಲೇಶ್ವರರು ಈ ಘಟನೆಗೆ ಸಂಬಂಧಿಸಿದಂತೆ ಸೇನೆಗೆ ಸಂಪೂರ್ಣ ಉಸ್ತುವಾರಿ ನೀಡಲು ಮನವಿ ಮಾಡಿದ್ದಾರೆ.
ಭದ್ರತಾ ಕ್ರಮಗಳು
ಭಕ್ತರ ಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಭದ್ರತಾ ಕ್ರಮಗಳನ್ನು ಕಠಿಣಗೊಳಿಸಿದ್ದಾರೆ. ಇಂಟಿಗ್ರೇಟೆಡ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್ ಸಂಗಮದ ಬಳಿ ನಿಗಾ ಇರಿಸಲಿದೆ.
ಪ್ರಮುಖ ದಿನಗಳು:
- ಜನವರಿ 29: ಮೌನಿ ಅಮಾವಾಸ್ಯೆ ಸ್ನಾನ
- ಫೆಬ್ರವರಿ 26: ಮಹಾ ಶಿವರಾತ್ರಿ ಸ್ನಾನ
ನಿಯಂತ್ರಣ ಕ್ರಮಗಳು:
- ವಾಹನ ಸಂಚಾರಕ್ಕೆ ನಿರ್ಬಂಧ
- ಬ್ಯಾರಿಕೇಡ್ ಅಳವಡಿಕೆ