
ಮುಂಬಯಿ: ಬಿ.ಆರ್. ಚೋಪ್ರಾ ನಿರ್ದೇಶನದ ಐತಿಹಾಸಿಕ ಧಾರಾವಾಹಿ ‘ಮಹಾಭಾರತ’ದಲ್ಲಿ ಯೋಧ ಕರ್ಣನ ಪಾತ್ರ ನಿರ್ವಹಿಸಿ ದೇಶಾದ್ಯಂತ ಪ್ರಖ್ಯಾತರಾಗಿದ್ದ ಹಿರಿಯ ನಟ ಮತ್ತು ನಿರ್ದೇಶಕ ಪಂಕಜ್ ಧೀರ್ ಅವರು ಬುಧವಾರ (ಅಕ್ಟೋಬರ್ 15) ನಿಧನ ಹೊಂದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಪಂಕಜ್ ಧೀರ್ ಅವರು ಕಳೆದ ಕೆಲವು ಸಮಯದಿಂದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು. ಆರಂಭದಲ್ಲಿ ಚೇತರಿಕೆ ಕಂಡಿದ್ದರೂ, ಕೆಲ ತಿಂಗಳ ಹಿಂದೆ ಕಾಯಿಲೆ ಮರುಕಳಿಸಿದ ಪರಿಣಾಮ ತೀವ್ರ ಅಸ್ವಸ್ಥರಾಗಿ ಪ್ರಮುಖ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಸಿಂಟಾ ವತಿಯಿಂದ ಅಧಿಕೃತ ಹೇಳಿಕೆ
ಪಂಕಜ್ ಧೀರ್ ಅವರ ನಿಧನದ ಸುದ್ದಿಯನ್ನು ಸಿನಿ ಮತ್ತು ಟಿವಿ ಕಲಾವಿದರ ಸಂಘ (CINTAA) ಅಧಿಕೃತವಾಗಿ ದೃಢಪಡಿಸಿದೆ. “ನಮ್ಮ ಟ್ರಸ್ಟ್‌ನ ಹಿಂದಿನ ಅಧ್ಯಕ್ಷ, CINTAA ದ ಮಾಜಿ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಪಂಕಜ್ ಧೀರ್ ಜಿ ಅವರು ನಿಧನ ಹೊಂದಿದ್ದಾರೆ ಎಂದು ನಾವು ಅಪಾರ ದುಃಖದಿಂದ ತಿಳಿಸುತ್ತೇವೆ. ಇಂದು ಸಂಜೆ 4:30 ಕ್ಕೆ ಮುಂಬೈನ ವಿಲೇ ಪಾರ್ಲೆ (ಪಶ್ಚಿಮ) ಯಲ್ಲಿರುವ ಪವನ್ ಹನ್ಸ್ ಪಕ್ಕದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ,” ಎಂದು ಸಿಂಟಾ ಹೇಳಿಕೆಯಲ್ಲಿ ತಿಳಿಸಿದೆ.
ಡಾ. ವಿಷ್ಣುವರ್ಧನ್ ಅವರೊಂದಿಗೆ ನಟನೆ
ಪಂಕಜ್ ಧೀರ್ ಅವರು ಹಿಂದಿ ಮತ್ತು ಟಿವಿ ಜಗತ್ತಿನಲ್ಲಿ ಸಕ್ರಿಯರಾಗಿದ್ದರು. ಅವರು ‘ಸನಮ್ ಬೇವಫಾ’, ‘ಬಾದ್‌ಶಾ’ ಸೇರಿದಂತೆ ಹಲವು ಚಿತ್ರಗಳಲ್ಲಿ ಹಾಗೂ ‘ಚಂದ್ರಕಾಂತ’, ‘ಸಸುರಲ್ ಸಿಮರ್ ಕಾ’ ನಂತಹ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದರು. ‘ಮೈ ಫಾದರ್ ಗಾಡ್‌ಫಾದರ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು ಮತ್ತು ಅಭಿನಯ್ ಎಂಬ ನಟನಾ ಅಕಾಡೆಮಿಯನ್ನೂ ಸ್ಥಾಪಿಸಿದ್ದರು.
ವಿಶೇಷವಾಗಿ, ಪಂಕಜ್ ಧೀರ್ ಅವರು 1993 ರಲ್ಲಿ ಕೇಶು ರಾಮ್ಸೆ ನಿರ್ದೇಶಿಸಿದ ‘ವಿಷ್ಣು ವಿಜಯ’ ಎಂಬ ಕನ್ನಡ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದರು. ಈ ಚಿತ್ರವನ್ನು ಏಕಕಾಲದಲ್ಲಿ ಹಿಂದಿಯಲ್ಲಿ ‘ಅಶಾಂತ್’ ಹೆಸರಿನಲ್ಲಿಯೂ ಚಿತ್ರೀಕರಿಸಲಾಗಿತ್ತು. ಈ ಚಿತ್ರ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಮೊದಲ ಮತ್ತು ಏಕೈಕ ಕನ್ನಡ ಚಿತ್ರ ಎನ್ನುವುದು ಗಮನಾರ್ಹ.