
ನರಸಿಂಗಪುರ : ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ಭಾನುವಾರದಂದು ನಡೆದ ಅಮಾನವೀಯ ಘಟನೆಯೊಂದು ದೇಶದಾದ್ಯಂತ ಆಕ್ರೋಶ ಉಂಟುಮಾಡಿದೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿ ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು, ನೂರಾರು ಜನರ ಮುಂದೆ ಮದ್ಯಾಹ್ನದ ಹೊತ್ತಿನಲ್ಲಿ ಚಾಕುವಿನಿಂದ ಹತ್ಯೆಯಾಗಿರುವ ಘಟನೆ ದಾಖಲಾಗಿದೆ.
ಘಟನೆಯ ವಿವರ:
ಹತ್ಯೆಗೀಡಾದ ಯುವತಿ ಸಂಧ್ಯಾ ಚೌಧರಿ (ವಯಸ್ಸು 21) ಎಂಬವರಾಗಿದ್ದು, ಅವರು ನರ್ಸಿಂಗ್ ತರಬೇತಿ ಪಡೆದುಕೊಂಡು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಅಭಿಷೇಕ್ ಕೋಶ್ಚಿ ಎಂಬ ಯುವಕ ಅಲ್ಲಿಗೆ ಬಂದು, ಸಾರ್ವಜನಿಕರ ಎದುರಲ್ಲೇ ಚಾಕುವಿನಿಂದ ಸಂದ್ಯಾ ಅವರ ಮೇಲೆ ಹಠಾತ್ ದಾಳಿ ನಡೆಸಿದ್ದಾನೆ.
ಆಕೆಯು ಸಹಾಯಕ್ಕಾಗಿ ಕಿರುಚಿದರೂ ಕೂಡ, ಯಾರೂ ಮಧ್ಯ ಪ್ರವೇಶಿಸಲಿಲ್ಲ. ಆರೋಪಿ ಸಂದ್ಯಾ ಅವರ ಕತ್ತು ಸೀಳಿ ಸ್ಥಳದಲ್ಲೇ ಆಕೆಯನ್ನು ಹತ್ಯೆಗೈದಿದ್ದಾನೆ. ಈ ದುರ್ಘಟನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರೀತಿ ನಿರಾಕರಣೆಯ ಹಿನ್ನಲೆ ಶಂಕೆ:
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಭಿಷೇಕ್ ಸಂದ್ಯಾ ಅವರ ಮೇಲೆ ಏಕಪಕ್ಷೀಯ ಪ್ರೀತಿಯನ್ನು ಹೊಂದಿದ್ದ. ಆದರೆ ಸಂದ್ಯಾ ಆತನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಮನಸ್ಸಿನಲ್ಲಿ ಶತ್ರುತ್ವ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಬಂಧನ ಮತ್ತು ಪ್ರಕರಣ ದಾಖಲೆ:
ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿ ಅಭಿಷೇಕ್ ನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿರುವ ಪೊಲೀಸರು, ಆತನ ವಿರುದ್ಧ ಭೀಕರ ಹತ್ಯೆ ಹಾಗೂ ಮಹಿಳಾ ವಿರೋಧಿ ಅಪರಾಧ ಪ್ರಕರಣಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭದ್ರತೆಯ ಕುರಿತಂತೆ ಗಂಭೀರ ಪ್ರಶ್ನೆ:
ಈ ಪ್ರಕರಣದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಸಾರ್ವಜನಿಕ ಸ್ಥಳದಲ್ಲೇ ನಡುಹಗಲಿನಲ್ಲಿ ನಡೆದ ಈ ಹತ್ಯೆ ಬಗ್ಗೆ ದೇಶದಾದ್ಯಂತ ಖಂಡನೆ ವ್ಯಕ್ತವಾಗಿದೆ. ಆಸ್ಪತ್ರೆಯ ಭದ್ರತಾ ವ್ಯವಸ್ಥೆಯಲ್ಲಿನ ದೌರ್ಬಲ್ಯವನ್ನು ಜನರು ಟೀಕಿಸುತ್ತಿದ್ದಾರೆ.
ಸಾರ್ವಜನಿಕರ ಆಗ್ರಹ:
ಆರೋಪಿಗೆ ತ್ವರಿತವಾಗಿ ಕಠಿಣ ಶಿಕ್ಷೆ ನೀಡಬೇಕು ಎಂಬ ಆಗ್ರಹ ದಟ್ಟವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ.