
ಲಕ್ನೋ: ಮೊಬೈಲ್ ಗೇಮ್‌ಗಳ ಅತಿಯಾದ ವ್ಯಸನ ಮತ್ತೊಂದು ದುರಂತಕ್ಕೆ ಕಾರಣವಾಗಿದ್ದು, ತಡರಾತ್ರಿಯವರೆಗೂ ‘ಫ್ರೀ ಫೈರ್’ ಗೇಮ್ ಆಡುತ್ತಿದ್ದ 13 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಲಕ್ನೋದ ಶಿವಾಜಿಪುರಂನಲ್ಲಿ ನಡೆದಿದೆ.
ಇಂದಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪರಮೇಶ್ವರ್ ಎನ್‌ಕ್ಲೇವ್‌ನ ಶಿವಾಜಿಪುರಂನಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬಾಲಕನನ್ನು ಸೀತಾಪುರ ಮೂಲದ ವಿವೇಕ್ ಕಶ್ಯಪ್ ಎಂದು ಗುರುತಿಸಲಾಗಿದೆ. ಆತನು ಫ್ರೀ ಫೈರ್ ಗೇಮ್‌ನ ಕಟ್ಟಾ ಅಭಿಮಾನಿಯಾಗಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ತಾಯಿ ಪ್ರೇಮ್ ಕುಮಾರಿ ಮತ್ತು ಮೂವರು ಸಹೋದರಿಯರಾದ ಅಂಜು, ಚಾಂದನಿ ಮತ್ತು ಪಿಂಕಿ ಅವರೊಂದಿಗೆ ಬಾಡಿಗೆ ಮನೆಯಲ್ಲಿ ವಿವೇಕ್ ವಾಸವಾಗಿದ್ದ. ಸಹೋದರಿ ಚಾಂದಿನಿ ಪ್ರಕಾರ, ವಿವೇಕ್ ಕಶ್ಯಪ್ ಕೆಲಸದಿಂದ ಹಿಂದಿರುಗಿದ ತಕ್ಷಣ ಮೊಬೈಲ್ ಆಟಗಳನ್ನು ಆಡಲು ಪ್ರಾರಂಭಿಸುತ್ತಿದ್ದ. ತಡರಾತ್ರಿ 10 ರಿಂದ 11 ರವರೆಗೆ ‘ಫ್ರೀ ಫೈರ್’ನಲ್ಲಿ ಮುಳುಗಿರುತ್ತಿದ್ದ.
ಘಟನೆ ನಡೆದ ರಾತ್ರಿ ಸಹ ವಿವೇಕ್ ತಡವಾಗಿ ಆಟವಾಡುತ್ತಲೇ ಇದ್ದ. ವಿವೇಕ್ ನಿದ್ರಿಸಿರಬಹುದು ಎಂದು ಭಾವಿಸಿ, ಕುಟುಂಬ ಸದಸ್ಯರು ಅವನ ಮೊಬೈಲ್ ಅನ್ನು ಚಾರ್ಜ್ ಮಾಡಿ, ಅವನಿಗೆ ಕಂಬಳಿಯಿಂದ ಮುಚ್ಚಿದರು. ಆದರೆ, ಬೆಳಿಗ್ಗೆ ಅವನಿಗೆ ಆಹಾರ ನೀಡಲು ಎಬ್ಬಿಸಲು ಪ್ರಯತ್ನಿಸಿದಾಗ, ಆತನ ದೇಹವು ತಣ್ಣಗಾಗಿತ್ತು ಮತ್ತು ಅವನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಕುಟುಂಬವು ತಕ್ಷಣ ನೆರೆಹೊರೆಯವರ ಸಹಾಯದಿಂದ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಬಾಲಕನು ಮೃತಪಟ್ಟಿರುವುದಾಗಿ ಘೋಷಿಸಿದರು. ಅತಿಯಾದ ಗೇಮಿಂಗ್ ಕಾರಣದಿಂದ ಈ ದುರಂತ ಸಂಭವಿಸಿರುವ ಸಾಧ್ಯತೆ ಇದೆ.