
ಬೆಂಗಳೂರು, ಏಪ್ರಿಲ್ 15: ಡೀಸೆಲ್ ಬೆಲೆ ಏರಿಕೆ ಮತ್ತು ಟೋಲ್ ಶುಲ್ಕ ಹೆಚ್ಚಳವನ್ನು ಖಂಡಿಸಿ, ರಾಜ್ಯದ ಲಾರಿ ಮಾಲೀಕರ ಸಂಘದ ಒಂದು ಬಣ ಇಂದು ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆದಿದ್ದು, ಅದೇ ವೇಳೆ ಇನ್ನೊಂದು ಬಣ ಈ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆ, ಸಂಘಟನೆಗಳ ನಡುವೆ ಗಂಭೀರ ಭಿನ್ನಾಭಿಪ್ರಾಯ ಕಂಡುಬಂದಿದೆ.
ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ನೇತೃತ್ವದ ಬಣವೇ ಮುಷ್ಕರ ಆರಂಭಿಸಿದ್ದು, “ಸರ್ಕಾರ ನಮ್ಮ ಬೇಡಿಕೆಗಳನ್ನು ಗಮನಿಸಿ ಕ್ರಮ ಕೈಗೊಂಡಿಲ್ಲ. ಇದು ರಾಜಕೀಯ ಪ್ರೇರಿತ ಮುಷ್ಕರವಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಮ್ಮ ಕ್ರಮ ಶಿಸ್ತುಬದ್ಧವಾಗಿರಲಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತ ಲಾರಿ ಓನರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಚನ್ನಾರೆಡ್ಡಿ ಮುಷ್ಕರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಡೀಸೆಲ್ ಬೆಲೆ ಏರಿಕೆಯಾಗಿದರೂ, ನಮ್ಮ ರಾಜ್ಯದಲ್ಲಿ ಇತರ ರಾಜ್ಯಗಳಿಗಿಂತ ಕಡಿಮೆ ದರವಿದೆ. ಇದೊಂದು ಅಗತ್ಯವಿಲ್ಲದ ಮುಷ್ಕರ. ಎಲ್ಲ ಜಿಲ್ಲಾ ಲಾರಿ ಸಂಘಟನೆಗಳು ನಮ್ಮೊಂದಿಗೆ ಇವೆ. ಲಾರಿಗಳ ಸಂಚಾರಿ ಎಂದಿನಂತೆ ನಡೆಯಲಿದೆ,” ಎಂದು ತಿಳಿಸಿದ್ದಾರೆ.
ಈ ಸಂಘರ್ಷದ ನಡುವಿನ , ಮುಷ್ಕರದ ಪರಿಣಾಮವಾಗಿ ಕೆಲವೊಂದು ಪ್ರದೇಶಗಳಲ್ಲಿ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಮನೆ ಮಾಡಿದೆ.