
ನವದೆಹಲಿ: ವಿವಾದಗಳ ನಡುವೆ ವಕ್ಸ್ ತಿದ್ದುಪಡಿ ಮಸೂದೆ-2025ಕ್ಕೆ ಲೋಕಸಭೆಯಿಂದ ಗುರುವಾರ ಅನುಮೋದನೆ ಲಭಿಸಿದೆ. ಸತತ 12 ಗಂಟೆಗಳ ತೀವ್ರ ಚರ್ಚೆ ಮತ್ತು ಕಟು ವಾದವಿವಾದಗಳ ನಂತರ ನಸುಕಿನ ವೇಳೆಗೆ ಮಸೂದೆಗೆ ಒಪ್ಪಿಗೆ ದೊರಕಿತು.
ಸರ್ಕಾರದ ಪಕ್ಷದ ಸದಸ್ಯರು ಮಸೂದೆಯು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ಬಲವಾಗಿ ಸಮರ್ಥಿಸಿದರೆ, ವಿರೋಧ ಪಕ್ಷಗಳು ಇದನ್ನು ಮುಸ್ಲಿಂ ವಿರೋಧಿ ಮಸೂದೆ ಎಂದು ಕಟುವಾಗಿ ಟೀಕಿಸಿದ್ದಾರೆ. ವಿರೋಧ ಪಕ್ಷಗಳು ಸೂಚಿಸಿದ ತಿದ್ದುಪಡಿ ಪ್ರಸ್ತಾಪಗಳನ್ನು ಧ್ವನಿಮತದ ಮೂಲಕ ತಿರಸ್ಕರಿಸಲಾಯಿತು.
ಅಂತಿಮ ಮತದಾನದಲ್ಲಿ ಮಸೂದೆಗೆ 288 ಸದಸ್ಯರು ಬೆಂಬಲ ನೀಡಿದರೆ, 232 ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ಮಸೂದೆಯು ಈಗ ರಾಜ್ಯಸಭೆಗೆ ಹೋಗಲಿದೆ. ರಾಜಕೀಯ ವಿಶ್ಲೇಷಕರು ರಾಜ್ಯಸಭೆಯಲ್ಲಿ ಮಸೂದೆಗೆ ಬಹುಮತ ಸಿಗುವುದು ಕಷ್ಟ ಎಂದು ಅಭಿಪ್ರಾಯಪಡುತ್ತಿದ್ದಾರೆ.