
ಬೀದರ್: “ನನಗೂ ಅಂಡರ್‌ವರ್ಲ್ಡ್ ಸೇರಿ ಕೆಲವು ಕಡೆಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ,” ಎಂದು ಕರ್ನಾಟಕ ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಗುರುವಾರ ಬಹಿರಂಗವಾಗಿ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೀದರ್ ನಗರಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದರು. “ಹೌದು, ನನಗೂ ಕೆಲವು ಕರೆಗಳು ಬಂದಿವೆ. ಆದರೆ, ನಾನು ಈ ಎಲ್ಲಕ್ಕೆ ಹೆದರುವ ವ್ಯಕ್ತಿ ಅಲ್ಲ. ದೇವರು ನನ್ನ ಜೀವನ ಹೇಗಿರಬೇಕು ಎಂಬುದನ್ನು ಬರೆದುಕೊಂಡಿದ್ದಾರೆ. ನಾನು ನೆಮ್ಮದಿಯಿಂದ ಬದುಕಿ, ನೆಮ್ಮದಿಯಿಂದ ಸಾಯಲು ಪ್ರಾರ್ಥನೆ ಮಾಡುತ್ತೇನೆ,” ಎಂದು ಖಾದರ್ ಹೇಳಿದರು.
ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರು ಪಿಎಫ್‌ಐ ಸಂಘಟನೆಯಿಂದ ಯು.ಟಿ. ಖಾದರ್ ರವರಿಗೆ ಜೀವ ಬೆದರಿಕೆ ಇದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, “ನನಗಾಗಿ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸುವ ಅಗತ್ಯವಿಲ್ಲ. ಜಿಲ್ಲೆಯ ಜನರ ಸುರಕ್ಷತೆಗೆ ಅಗತ್ಯವಿದ್ದರೆ ಸ್ಥಾಪಿಸಬಹುದು. ಆದರೆ ನನ್ನ ವಿಷಯದಲ್ಲಿ ಅಷ್ಟು ಅಗತ್ಯವಿಲ್ಲ. ಎಲ್ಲವನ್ನೂ ದೇವರು ನಿರ್ಧಾರ ಮಾಡುತ್ತಾರೆ. ನಮ್ಮ ಕೈಯಲ್ಲಿ ಏನೂ ಇಲ್ಲ,” ಎಂದರು.
ಈ ಹೇಳಿಕೆಯಿಂದ ರಾಜ್ಯ ರಾಜಕೀಯ ವಲಯದಲ್ಲಿ ಆತಂಕ ಮೂಡಿದ್ದು, ಈ ಬೆದರಿಕೆ ಕರೆಗಳ ಬಗ್ಗೆ ಹೆಚ್ಚಿನ ತನಿಖೆಗೆ ಆಗ್ರಹ ವ್ಯಕ್ತವಾಗಿದೆ.