
ಉಡುಪಿ : ಉಡುಪಿ ಜಿಲ್ಲೆಯ ಕಾರ್ಕಳದ ಪೆರ್ವಾಜೆ ಪ್ರದೇಶದಲ್ಲಿ ಗಂಗಾ ಪ್ಯಾರಡೈಸ್ ಬಳಿ ನಿನ್ನೆ ರಾತ್ರಿ ಸುಮಾರು 9.15ರ ಸುಮಾರಿಗೆ ಚಿರತೆಯೊಂದು ರಸ್ತೆಯಿಂದ ಕಾಡಿನತ್ತ ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾರ್ಕಳ ನಗರದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವ ಘಟನೆಗಳು ಸರಾಗವಾಗಿ ನಡೆಯುತ್ತಿದ್ದು, ಇದೇ ಚಿರತೆಯಾಗಿರಬಹುದೆಂಬ ಅನುಮಾನ ಮೂಡಿಸಿದೆ.
ಸ್ಥಳೀಯ ನಿವಾಸಿಗಳು ಈ ಬಗ್ಗೆ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೂ ರಾತ್ರಿ ಹೊತ್ತಿನಲ್ಲಿ ರಸ್ತೆ ಉಪಯೋಗಿಸುವವರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು, ಸೈಕಲ್ ಸವಾರರು ಮತ್ತು ಮಕ್ಕಳು, ಹಿರಿಯರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ಸಂಜೆ ಮತ್ತು ರಾತ್ರಿ ವೇಳೆ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗೆ ಹೋಗದಂತೆ, ಹಾಗೂ ಚಿರತೆಯ ಚಲನೆಗಳನ್ನು ಗಮನಿಸಿ ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿಮಾಡಲಾಗಿದೆ.