
ಹೊಸ ದೆಹಲಿ: ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಮುಖ ತಂತ್ರಜ್ಞಾನ ಸಂಸ್ಥೆಯಾದ ಲೆನೊವೊ ಬುಧವಾರದಂದು ತನ್ನ ಬಹುನಿರೀಕ್ಷಿತ ‘ಟ್ಯಾಬ್ ಪ್ಲಸ್ ಜನರೇಷನ್ 2’ (Lenovo Tab Plus Gen 2) ಅನ್ನು ಅದ್ಧೂರಿಯಾಗಿ ಅನಾವರಣಗೊಳಿಸಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಈ ಪ್ರೀಮಿಯಂ ಟ್ಯಾಬ್ಲೆಟ್‌ನೊಂದಿಗೆ, ಗೇಮಿಂಗ್ ಪ್ರಿಯರನ್ನು ಸೆಳೆಯಲು ಹೊಸ ಸರಣಿಯ ‘LOQ ಮಾನಿಟರ್’ಗಳನ್ನು ಸಹ ಕಂಪನಿಯು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.
ಮನರಂಜನೆ ಮತ್ತು ಕಚೇರಿಯ ಕೆಲಸಗಳೆರಡಕ್ಕೂ ಸೂಕ್ತವಾಗುವಂತೆ ಈ ಹೊಸ ಟ್ಯಾಬ್ಲೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಅಳವಡಿಸಲಾಗಿರುವ ಭರ್ಜರಿ ಸೌಂಡ್ ಸಿಸ್ಟಮ್ ಮತ್ತು ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯವು ಗ್ರಾಹಕರ ಗಮನ ಸೆಳೆಯುತ್ತಿದ್ದು, ಪ್ರೀಮಿಯಂ ಆಂಡ್ರಾಯ್ಡ್ ಟ್ಯಾಬ್ಲೆಟ್ ವಿಭಾಗದಲ್ಲಿ ಇದು ಹೊಸ ಸಂಚಲನ ಸೃಷ್ಟಿಸುವ ಮುನ್ಸೂಚನೆ ನೀಡಿದೆ.
ಲೆನೊವೊ ಟ್ಯಾಬ್ ಪ್ಲಸ್ ಜೆನ್ 2: ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು
- ಡಿಸ್ಪ್ಲೇ: 12.1-ಇಂಚಿನ ದ್ರುಶ್ಯ ವೈಭವ ನೀಡುವ 2.5K IGZO LCD ಸ್ಕ್ರೀನ್ (120Hz ರಿಫ್ರೆಶ್ ರೇಟ್, 800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್).
- ಪ್ರೊಸೆಸರ್: ಅತ್ಯಂತ ವೇಗದ ಕಾರ್ಯಕ್ಷಮತೆಯುಳ್ಳ ಆಕ್ಟಾ-ಕೋರ್ MediaTek Dimensity 7400 ಚಿಪ್‌ಸೆಟ್.
- ಮೆಮೊರಿ ಹಾಗೂ ಸ್ಟೋರೇಜ್: 8GB RAM ಸಾಮರ್ಥ್ಯದೊಂದಿಗೆ 125GB ಮತ್ತು 256GB UFS 3.1 ಆಂತರಿಕ ಸ್ಟೋರೇಜ್ ಆಯ್ಕೆ (2TB ವರೆಗೆ ವಿಸ್ತರಿಸಬಹುದು).
- ಆಪರೇಟಿಂಗ್ ಸಿಸ್ಟಮ್: ಲೇಟೆಸ್ಟ್ Android 16 ಸಪೋರ್ಟ್. (Android 18 ವರೆಗೆ 2 ಪ್ರಮುಖ OS ಅಪ್‌ಡೇಟ್‌ಗಳು ಮತ್ತು 2030 ರವರೆಗೆ ಭದ್ರತಾ ಅಪ್‌ಡೇಟ್‌ಗಳ ಭರವಸೆ).
- ಕ್ಯಾಮೆರಾ: ಆಟೋಫೋಕಸ್ ತಂತ್ರಜ್ಞಾನವಿರುವ 13MP ಹಿಂಬದಿಯ ಕ್ಯಾಮೆರಾ ಮತ್ತು ವಿಡಿಯೋ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾ.
- ಆಡಿಯೋ ಸಿಸ್ಟಮ್: ಡಾಲ್ಬಿ ಅಟ್ಮಾಸ್ (Dolby Atmos) ತಂತ್ರಜ್ಞಾನದ 9 ಜೆಬಿಎಲ್ (JBL) ಸ್ಪೀಕರ್‌ಗಳ ಸೌಂಡ್ ಸೆಟಪ್.
- ಬ್ಯಾಟರಿ: 45W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 10,200mAh ಬೃಹತ್ ಬ್ಯಾಟರಿ.
- ಸಂಪರ್ಕಗಳು ಮತ್ತು ಪ್ರೊಟೆಕ್ಷನ್: Wi-Fi 6, Bluetooth 5.4 ಹಾಗೂ ಧೂಳು-ನೀರಿನಿಂದ ರಕ್ಷಣೆಗಾಗಿ IP52 ರೇಟಿಂಗ್.
ವಿನ್ಯಾಸ ಮತ್ತು ಕಾರ್ಯಕ್ಷಮತೆಯ ಪವರ್‌ಹೌಸ್
ಈ ಟ್ಯಾಬ್ಲೆಟ್‌ನ ವಿನ್ಯಾಸದಲ್ಲಿ ಲೆನೊವೊ ಗ್ರಾಹಕರ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿದೆ. ಇದರಲ್ಲಿ 360 ಡಿಗ್ರಿ ತಿರುಗಿಸಬಹುದಾದ ಇನ್‌ಬಿಲ್ಟ್ ‘ಕಿಕ್‌ಸ್ಟ್ಯಾಂಡ್’ ನೀಡಲಾಗಿದ್ದು, ಬಳಕೆದಾರರು ತಮಗೆ ಬೇಕಾದ ಆಂಗಲ್‌ನಲ್ಲಿ (ಹ್ಯಾಂಗಿಂಗ್, ಥಿಯೇಟರ್, ಲೀನ್ ಮೋಡ್) ಇಟ್ಟುಕೊಂಡು ಸಿನಿಮಾ ವೀಕ್ಷಿಸಬಹುದು ಅಥವಾ ಆಫೀಸ್ ಕೆಲಸ ಮಾಡಬಹುದು. ಇದರ ವಿಶೇಷವೆಂದರೆ, ಚಾರ್ಜಿಂಗ್‌ಗೆ ಇಟ್ಟಾಗ ಇದು ಡಿಜಿಟಲ್ ಫೋಟೋ ಫ್ರೇಮ್ ಅಥವಾ ಗಡಿಯಾರದಂತೆ ಕೆಲಸ ಮಾಡುತ್ತದೆ. ಇನ್ನು ಇದರ ಬ್ಲೂಟೂತ್ ಸ್ಪೀಕರ್ ಮೋಡ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಕನೆಕ್ಟ್ ಮಾಡಿ ಕೇವಲ ಸ್ಪೀಕರ್ ಮಾದರಿಯಲ್ಲೂ ಇದನ್ನು ಬಳಸಿಕೊಳ್ಳಬಹುದು. ಸಿಂಗಲ್ ಚಾರ್ಜ್‌ನಲ್ಲಿ ಬರೋಬ್ಬರಿ 15 ಗಂಟೆಗಳ ಕಾಲ ಸತತವಾಗಿ ಯೂಟ್ಯೂಬ್ ವೀಕ್ಷಿಸಬಹುದಾದ ಬ್ಯಾಟರಿ ಲೈಫ್ ಇದರ ಹೆಗ್ಗಳಿಕೆಯಾಗಿದೆ.
ಹೊಸ LOQ ಮಾನಿಟರ್‌ಗಳ ವೈಶಿಷ್ಟ್ಯತೆ
ಟ್ಯಾಬ್ಲೆಟ್ ಜೊತೆಗೆ ಬಿಡುಗಡೆಯಾಗಿರುವ LOQ ಗೇಮಿಂಗ್ ಮಾನಿಟರ್ ಸರಣಿಯಲ್ಲಿ LOQ 24-10, LOQ 27-10, ಮತ್ತು ಪ್ರೀಮಿಯಂ ಮಾದರಿಯಾದ LOQ 27Q-10 ಲಭ್ಯವಿವೆ. ಈ ಪೈಕಿ 27Q-10 ಮಾದರಿಯು 27-ಇಂಚಿನ QHD IPS ಡಿಸ್ಪ್ಲೇ ಹೊಂದಿದ್ದು, ಗೇಮರ್‌ಗಳಿಗಾಗಿ 180Hz ರಿಫ್ರೆಶ್ ರೇಟ್ ಮತ್ತು ಕೇವಲ 0.5ms ರೆಸ್ಪಾನ್ಸ್ ಟೈಮ್ ನೀಡುತ್ತದೆ. ಇದು PS5 ಮತ್ತು Xbox ನಂತಹ ಗೇಮಿಂಗ್ ಕನ್ಸೋಲ್‌ಗಳಿಗೂ ಸಪೋರ್ಟ್ ಮಾಡಲಿದ್ದು, ಮುಂದಿನ ದಿನಗಳಲ್ಲಿ 32-ಇಂಚಿನ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ.
ಬೆಲೆ ಮತ್ತು ಲಭ್ಯತೆಯ ವಿವರಗಳು
ಲೆನೊವೊ ಟ್ಯಾಬ್ ಪ್ಲಸ್ ಜೆನ್ 2 ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ:
- 8GB RAM + 128GB ಸ್ಟೋರೇಜ್ ಆವೃತ್ತಿ: ₹35,999
- 8GB RAM + 256GB ಸ್ಟೋರೇಜ್ ಆವೃತ್ತಿ: ₹38,999
ಈ ಟ್ಯಾಬ್ಲೆಟ್ ಸುಂದರವಾದ ‘ಸೆಲೆಸ್ಟಿಯಲ್ ವೈಟ್’ ಬಣ್ಣದಲ್ಲಿ ಸಿಗಲಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್ ಹಾಗೂ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ ಲಭ್ಯವಿರಲಿದೆ. ಇನ್ನು ಗೇಮಿಂಗ್ ಪ್ರಿಯರ ಬಜೆಟ್‌ಗೆ ಹೊಂದುವ LOQ ಮಾನಿಟರ್‌ಗಳ ಆರಂಭಿಕ ಬೆಲೆ ₹9,799 ಆಗಿದ್ದು, ಇವುಗಳನ್ನು ಅಮೆಜಾನ್ ಇಂಡಿಯಾ ಮೂಲಕ ಖರೀದಿಸಬಹುದಾಗಿದೆ. ಹೆಚ್ಚಿನ ಆಕ್ಸೆಸರಿಗಳಾದ ಲೆನೊವೊ ಟ್ಯಾಬ್ ಪೆನ್ ಪ್ಲಸ್ ಮತ್ತು ಕೀಬೋರ್ಡ್‌ಗಳನ್ನು ಗ್ರಾಹಕರು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.
































