
ಬೆಂಗಳೂರು: ‘ಸರಿಗಮಪ’ ರಿಯಾಲಿಟಿ ಶೋ ಸೀಸನ್ 13ರ ಮೂಲಕ ಮನೆಮಾತಾಗಿದ್ದ ಪ್ರತಿಭಾನ್ವಿತ ಗಾಯಕಿ ಸುಹಾನ ಸೈಯದ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರು ತಮ್ಮ ಬಹುಕಾಲದ ಗೆಳೆಯ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವಿವಾಹವಾಗಲಿದ್ದಾರೆ.
ಸುಹಾನಾ ಮತ್ತು ನಿತಿನ್ ಅವರದ್ದು ಪ್ರೇಮ ವಿವಾಹ. ಸುಮಾರು 16 ವರ್ಷಗಳ ಸುದೀರ್ಘ ಸ್ನೇಹವು ಪ್ರೀತಿಗೆ ತಿರುಗಿದ್ದು, ಈ ವಿಷಯವನ್ನು ಸುಹಾನಾ ಸೈಯದ್ ಅವರು ಇನ್‌ಸ್ಟಾಗ್ರಾಂನಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಕುವೆಂಪು ಮಂತ್ರ ಮಾಂಗಲ್ಯದ ಆಶಯ
ವಿಶೇಷವೆಂದರೆ, ಇದು ಅಂತರ್ ಧರ್ಮೀಯ ವಿವಾಹವಾಗಿದ್ದು, ಪ್ರಸಿದ್ಧ ಕವಿ ಕುವೆಂಪುರವರ ‘ಮಂತ್ರ ಮಾಂಗಲ್ಯ’ದ ಆಶಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿವಾಹವು ನಾಳೆ ಕನಕಪುರದ ಖಾಸಗೀ ರೆಸಾರ್ಟ್‌ನಲ್ಲಿ ನಡೆಯಲಿದೆ.
ಮದುವೆಗೆ ಸಂಬಂಧಿಸಿದ ಆಮಂತ್ರಣ ಕರೆಯೋಲೆಯಲ್ಲಿ ಈ ಬಗ್ಗೆ ಉಲ್ಲೇಖವಿದ್ದು, “ಪ್ರೀತಿ ವಿಶ್ವದ ಭಾಷೆ. ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವರ ವಿರಚಿತ ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನ ಮತ್ತು ನಿತಿನ್. ನಮ್ಮ ನಡೆ ವಿಶ್ವಮಾನವತ್ವದೆಡೆ,” ಎಂದು ಬರೆಯಲಾಗಿದೆ.
ವರ ನಿತಿನ್ ಶಿವಾಂಶ್ ಅವರು ಪ್ರಸಿದ್ಧ ರಂಗ ತರಬೇತಿ ಕೇಂದ್ರವಾದ ನೀನಾಸಂನಲ್ಲಿ ತರಬೇತಿ ಪಡೆದ ರಂಗಭೂಮಿ ಕಲಾವಿದರಾಗಿದ್ದಾರೆ.