
ಕುಂದಾಪುರ: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನ ಮೃತದೇಹ ಶನಿವಾರ ಬೆಳಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ಹೆಮ್ಮಾಡಿ ಸಂತೋಷನಗರ ನಿವಾಸಿ ಲವೇಶ್ ಪೂಜಾರಿ ಅವರ ಪುತ್ರ, ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ನಮೇಶ್ (17) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ನಮೇಶ್ ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ವಾಪಸಾಗಿರಲಿಲ್ಲ. ತಂದೆ ಇತ್ತೀಚೆಗೆ ಕೊಡಿಸಿದ್ದ ತನ್ನ ಐಫೋನ್ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು, ಬೈಕ್‌ನಲ್ಲಿ ತೆರಳಿದ್ದನು. ಹೆಮ್ಮಾಡಿ ಸಮೀಪದ ಕನ್ನಡಕುದ್ರು ನದಿ ತೀರದಲ್ಲಿ ಆತನ ಬೈಕ್ ಮತ್ತು ಕಾಲೇಜು ಬ್ಯಾಗ್ ಪತ್ತೆಯಾಗಿತ್ತು.

ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಕುಟುಂಬದವರು ಕುಂದಾಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ಆರಂಭಿಸಿದ್ದರು. ಗುರುವಾರ ಸಂಜೆ ಮತ್ತು ಶುಕ್ರವಾರ ಅಗ್ನಿಶಾಮಕದಳ, ಗಂಗೊಳ್ಳಿಯ ಈಜುಪಟು ದಿನೇಶ್ ಖಾರ್ವಿ ಮತ್ತು ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದ್ದರೂ, ನಮೇಶ್ ಪತ್ತೆಯಾಗಿರಲಿಲ್ಲ.
ಶನಿವಾರ ಬೆಳಿಗ್ಗೆ ಗಂಗೊಳ್ಳಿ ದಾಕುಹಿತ್ಲು ನದಿತೀರದಲ್ಲಿ ನಮೇಶ್ ಮೃತದೇಹ ಪತ್ತೆಯಾಗಿದೆ. ಆತನ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




































