
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಸಮೀಪ ಸಂಚಾರ ನಿರ್ಬಂಧಕ್ಕಾಗಿ ಹಾಕಿದ್ದ ಮಣ್ಣಿನ ರಾಶಿಗೆ ಬೈಕ್ ಢಿಕ್ಕಿಯಾಗಿ ಯಕ್ಷಗಾನ ಮದ್ದಲೆ ಕಲಾವಿದರೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ (ಏಪ್ರಿಲ್.5) ಮಧ್ಯರಾತ್ರಿ ಸಂಭವಿಸಿದೆ.
ಮೃತರನ್ನು ಹಟ್ಟಿಯಂಗಡಿ ಮೇಳದ ಮದ್ದಲೆಗಾರ ನಾರಾಯಣ ಪೂಜಾರಿ (40) ಎಂದು ಗುರುತಿಸಲಾಗಿದೆ. ಶಿರೂರಿನ ತೂದಳ್ಳಿಯಲ್ಲಿ ಇದೇ ದಿನ ಸಂಜೆ ಯಕ್ಷಗಾನ ಪ್ರದರ್ಶನ ನಿಗದಿಯಾಗಿದ್ದರಿಂದ ಅವರು ಅಲ್ಲಿಗೆ ತೆರಳಿದ್ದರು. ಆದರೆ ಮಳೆ ಕಾರಣದಿಂದ ಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ರಾತ್ರಿ ಮನೆಗೆ ವಾಪಸ್ ಹೊರಟಿದ್ದರು.
ರಾತ್ರಿ ಸುಮಾರು 1.30ರ ಸುಮಾರಿಗೆ ಅವರು ಮುಳ್ಳಿಕಟ್ಟೆಯಿಂದ ಅರಾಟೆ ಸೇತುವೆ ಕಡೆಗೆ ಸಾಗುತ್ತಿದ್ದ ವೇಳೆ, ಕನ್ನಡಕುದ್ರು–ಮೂವತ್ತುಮುಡಿ ನಡುವೆ ಸಂಚಾರ ನಿರ್ಬಂಧಕ್ಕಾಗಿ ಹಾಕಲಾಗಿದ್ದ ಮಣ್ಣಿನ ರಾಶಿ ಗೋಚರವಾಗದೆ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಪಲ್ಟಿಯಾಗಿ ನಾರಾಯಣ ಪೂಜಾರಿಗೆ ತೀವ್ರ ಗಾಯವಾಗಿತ್ತು. ತಕ್ಷಣ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅಷ್ಟರಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಪ್ರಬಲ ಜಾಗ:
ಈ ಭಾಗದಲ್ಲಿ ಹಳೆಯ ಸೇತುವೆ ಮುಚ್ಚಿ ಸಂಚಾರವನ್ನು ಹೊಸ ಸೇತುವೆ ಕಡೆಗೆ ವರ್ಗಾಯಿಸಿದ ಬಳಿಕ, ಮೂವತ್ತುಮುಡಿ ಜಂಕ್ಷನ್‌ನಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಈವರೆಗೆ ನಾಲ್ಕು ಮಂದಿ ಈ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದು, ಸ್ಥಳೀಯರು ವಿವಿಧ ಸಮಯಗಳಲ್ಲಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಇಲ್ಲದೇ ಇರುವುದರಿಂದ ಸಾರ್ವಜನಿಕರ ಆತಂಕ ಹೆಚ್ಚಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.