
ಕಾರ್ಕಳ ತಾಲೂಕಿನ ನೂರಾಲ್‌ಬೆಟ್ಟು ಗ್ರಾಮದ ಮೂಲಿಕಾರಪ್ಪ ಪ್ರದೇಶದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದ ಇಬ್ಬರನ್ನು ಕಾರ್ಕಳ ವನ್ಯಜೀವಿ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಪ್ರಶಾಂತ್ ಪೂಜಾರಿ ಮತ್ತು ಅಶೋಕ್ ಪೂಜಾರಿ ಎಂದು ಗುರುತಿಸಲಾಗಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.
ಅಪರಾಧ ಸ್ಥಳದಲ್ಲಿ ನಡೆಸಿದ ತಪಾಸಣೆಯಲ್ಲಿ 1 ಬೇಟೆ ಬಂದೂಕು, 21 ಕಾಡತೂಸು, 1 ಸರ್ಚ್‌ಲೈಟ್, 2 ಮೊಬೈಲ್ ಫೋನ್, ಬೇಟೆಗೆ ಬಳಸಿದ ಕಾರು ಮತ್ತು 1 ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ತನಿಖೆಯ ನಂತರ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಕಾರ್ಯಾಚರಣೆಯನ್ನು ಕುದುರೆಮುಖ ವನ್ಯಜೀವಿ ವಿಭಾಗದ ಕಾರ್ಕಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮು ಬಾಬು ಅವರ ನಿರ್ದೇಶನದಂತೆ, ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಶಿಧರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಅದರಲ್ಲಿ ಉಪವಲಯ ಅರಣ್ಯಾಧಿಕಾರಿ ರಾಜು ಎಲ್.ಜೆ, ಅರಣ್ಯ ರಕ್ಷಕರು ಅಭಿಲಾಷ್ ಎಸ್.ಬಿ, ಪಕೀರಪ್ಪ, ಮಲ್ಲಯ್ಯ ಹಾಗೂ ಬೇಟೆ ನಿಯಂತ್ರಣ ಕಾವಲುಗಾರರಾದ ಹರೀಶ್ ಎಂ, ನಿತಿನ್, ಅಜಿತ್ ಹಾಗೂ ವಾಹನ ಚಾಲಕರಾದ ದಾಮೋದರ, ನಿತಿನ್ ಜೆ ಹೆಡ್ಡೆ ಅವರು ಪ್ರಮುಖ ಪಾತ್ರವಹಿಸಿದ್ದರು. ಈ ಕಾರ್ಯಾಚರಣೆ ವನ್ಯಜೀವಿ ಸಂರಕ್ಷಣೆಗೆ ಮತ್ತಷ್ಟು ಬಲ ನೀಡಿದ್ದು, ಅಕ್ರಮ ಬೇಟೆಗಾರರಿಗೆ ಎಚ್ಚರಿಕೆಯ ಸಂದೇಶವಾಗಿಯೂ ಪರಿಣಮಿಸಿದೆ.