
ಕೂಡಲಸಂಗಮ : ಮೀಸಲಾತಿ ಹೋರಾಟದಿಂದ ರಾಜ್ಯದ ಗಮನ ಸೆಳೆದಿದ್ದ ಕೂಡಲಸಂಗಮದ ಪಂಚಮಸಾಲಿ ಮಠದ ಆವರಣಕ್ಕೆ ಭಾನುವಾರ ರಾತ್ರೋರಾತ್ರಿ ಬೀಗ ಹಾಕಲಾಗಿದ್ದು, ಭಕ್ತವೃಂದದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಮಠದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದರಿಂದ ರಕ್ಷಣೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರು ಸಮರ್ಥಿಸಿಕೊಂಡಿದ್ದಾರೆ.
ಕೂಡಲಸಂಗಮದಲ್ಲಿರುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ಗೆ ಸೇರಿದ, ಬಸವ ಜಯಮೃತ್ಯುಂಜಯ ಸ್ವಾಮೀಜಿ ಇರುವ ಪೀಠದ ಕಟ್ಟಡದ ಗೇಟಿಗೆ ಭಾನುವಾರ ರಾತ್ರಿ ಬೀಗ ಹಾಕಲಾಗಿದ್ದು, ಸುತ್ತಲೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾರು ಬೀಗ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ತಿಂಗಳಿನಿಂದ ವ್ಯವಸ್ಥಾಪಕರಾಗಿದ್ದವರು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿವಾದಕ್ಕೆ ಕಾರಣವೇನು? ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರಗೊಂಡಿತ್ತು. ವಿಜಯಾನಂದ ಕಾಶಪ್ಪನವರ್, ಹೆಬ್ಬಾಳ್ಕರ್ (ಕಾಂಗ್ರೆಸ್) ಮತ್ತು ಯತ್ನಾಳ್ (ಬಿಜೆಪಿ) ಮುಂತಾದವರು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆ ಪಕ್ಷದ ನಾಯಕರು ಹೋರಾಟದಿಂದ ಹಿಂದೆ ಸರಿದಿದ್ದರು. ಆದರೆ, ಅಂದಿನ ಬಿಜೆಪಿ ನಾಯಕ ಯತ್ನಾಳ್ ಮತ್ತು ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ನಡುವಿನ ಒಗ್ಗಟ್ಟು, ವಿಜಯಾನಂದ ಕಾಶಪ್ಪನವರ ಮತ್ತು ಶ್ರೀಗಳ ಮಧ್ಯೆ ಬಿರುಕು ಮೂಡಲು ಕಾರಣವಾಗಿತ್ತು. ಕೆಲ ತಿಂಗಳ ಹಿಂದೆ ಸ್ವಾಮೀಜಿ ಅವರನ್ನು ಪೀಠಾಧಿಪತಿ ಸ್ಥಾನದಿಂದ ಕೆಳಗಿಳಿಸುವ ವಿಚಾರವೂ ಚರ್ಚೆಗೆ ಬಂದಿತ್ತು. ಇದೀಗ ಕಾಶಪ್ಪನವರ ಬೆಂಬಲಿಗರು ಮಠಕ್ಕೆ ಬೀಗ ಹಾಕಿರುವುದು ಪಂಚಮಸಾಲಿ ಸಮುದಾಯದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಶ್ರೀಗಳು ಮತ್ತು ಶಾಸಕರ ಪ್ರತಿಕ್ರಿಯೆ: ಘಟನೆ ಕುರಿತು ಪ್ರತಿಕ್ರಿಯಿಸಿದ ಜಯಮೃತ್ಯುಂಜಯ ಶ್ರೀಗಳು, “ನಾನು ಸಮಾಜ ಸಂಘಟನೆ ಹಾಗೂ ಮೀಸಲಾತಿ ಹೋರಾಟಕ್ಕೆ ಜನರನ್ನು ಸಿದ್ಧಗೊಳಿಸಲು ಜಿಲ್ಲಾ ಪ್ರವಾಸದಲ್ಲಿದ್ದೇನೆ. ನಾನು ಹೊರಗಿದ್ದಾಗ ಏನು ನಡೆಯಿತು ಎಂದು ಗೊತ್ತಿಲ್ಲ, ಯಾರು ಬೀಗ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಪೀಠಕ್ಕೆ ತಲುಪಿದ ಬಳಿಕ ನೈಜ ಸ್ಥಿತಿ ಅರಿಯುತ್ತೇನೆ” ಎಂದರು.
ಟ್ರಸ್ಟ್ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, “ಮಠದಲ್ಲಿ ಅಹಿತಕರ ಚಟುವಟಿಕೆಗಳು ನಡೆಯದಿರಲಿ ಎಂಬ ಉದ್ದೇಶದಿಂದ ಗೇಟ್ ಹಾಕಿ ಬೀಗ ಹಾಕಲಾಗಿದೆ. ಮಠದ ಟ್ರಸ್ಟ್ ಅಧ್ಯಕ್ಷನಾಗಿ ಮಠದ ಸುರಕ್ಷತೆ ನನ್ನ ಜವಾಬ್ದಾರಿ. ಇದು ಸ್ವಾಮೀಜಿಗೆ ಹೇಳಿ ಮಾಡುವಂತದ್ದಲ್ಲ. ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.